ನವದೆಹಲಿ 27: ಹಿಜ್ಬುಲ್ಲಾ-ಇಸ್ರೇಲ್ ನಡುವಿನ ಕದನ ವಿರಾಮ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಲೆಬನಾನ್ ಗಡಿಯಲ್ಲಿ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಸಿರಿಯಾ ಮತ್ತು ಲೆಬನಾನ್ ನಡುವಿನ ಗಡಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ನಡೆಸಿವೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ದಾಳಿಯಲ್ಲಿ ಇಬ್ಬರು ಯೋಧರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಣ ಸಂಘರ್ಷವು ಕಳೆದ ವರ್ಷ ಆರಂಭವಾಗಿದ್ದು ಲೆಬನಾನ್‌ನಲ್ಲಿ ಕನಿಷ್ಠ 2,900 ಮಂದಿ ಮೃತಪಟ್ಟಿದ್ದಾರೆ. 13,150 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.