ಘಟಪ್ರಭಾ : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮಧ್ಯದಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ.
ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾದ ಈ ಸೇತುವೆ ಮೇಲೆ ದಿನ ನಿತ್ಯ ಪಾದಚಾರಿಗಳು ಹಾಗೂ ನೂರಾರು ವಾಹನಗಳು ಬೆಳ್ಳಿಗ್ಗೆ 4 ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಓಡಾಡುತ್ತಿದ್ದು, ಸ್ವಲ್ಪ ಆಯ ತಪ್ಪಿದರೆ ಪಟ್ಟಣದ ಚರಂಡಿಯಲ್ಲಿ ಬೀಳುವುದು ನಿಶ್ಚಿತ. ಈ ಪರಿಸ್ಥಿತಿ ಉಂಟಾಗಿ ಸುಮಾರು ಒಂದು ವರ್ಷ ಕಳೆದರೂ ಈ ರಸ್ತೆಗೆ ಸಂಬಂಧಿಸಿದ ಅಧಿಕಾರಿಗಳು ಕಣ್ಣು ತೆರೆದು ಸಹ ನೋಡಿಲ್ಲ.
ಸಾರ್ವಜನಿಕರ ಒತ್ತಾಯಕ್ಕೆ ಒಂದು ಸಾರಿ ಸ್ಥಳಕ್ಕೆ ಬಂದ ಪಿ.ಡಬ್ಲ್ಯೂ.ಡಿ ಮತ್ತು ಮಲ್ಲಾಪೂರ ಪಿ.ಜಿ ಪ.ಪಂ ಅಧಿಕಾರಿಗಳು ಸೇತುವೆ ಪರಿಶೀಲಿಸಿ ಹೋದವರು ಮರಳಿ ಬಂದಿಲ್ಲ.
ಈಗಾಗಲೇ ಈ ಸೇತುವೆಗೆ ಟೆಂಡರ ಆಗಿದೆ. ಆದರೆ ಕೆಲಸ ಪ್ರಾರಂಭಿಸಿಲ್ಲ. ಅಧಿಕಾರಿಗಳು ಆರೋಪ ಪ್ರತ್ಯಾರೋಪದಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲಸ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ಸ್ಥಳೀಯ ಸಮಸ್ಯೆಗಳ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಇವರ ಜಗಳದಲ್ಲಿ ಸದರಿ ಸೇತುವೆಯ ಟೆಂಡರ್ ಅವಧಿ ಮುಗಿಯುವ ಹಂತಕ್ಕೆ ಬಂದಿದೆ. ಕಾರಣ ಇನ್ನಾದರೂ ಅಧಿಕಾರಿಗಳು ಗಮನ ಹರಿಸಿ ಸೇತುವೆ ದುರಸ್ತಿಗೆ ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಸೇತುವೆಗೆ ಟೆಂಡರ ಆಗಿದ್ದು, ಕೆಲವು ಸ್ಥಳಿಯ ಸಮಸ್ಯೆಗಳಿಂದ ಕೆಲಸ ಪ್ರಾರಂಭವಾಗಿಲ್ಲ. ಸೇತುವೆ ಮದ್ಯದಲ್ಲ್ಲಿ ಪ.ಪಂ ನೀರಿನ ಪೈಪ ಲೈನ್ ಹಾಗೂ ವಿದ್ಯುತ್ ಕಂಭಗಳ ಜೊತೆ ಟಿ.ಸಿ ಕೂಡಾ ಇದೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿಲ್ಲ.
ನಾಗಾಭರಣ, ಸ.ಇ ಪಿ.ಡಬ್ಲ್ಯೂಡಿ ಗೋಕಾಕ
ಎಲ್ಲ ರಸ್ತೆಗಳಲ್ಲಿ ನೀರಿನ ಪೈಪು ಇರುವುದು ಸಹಜ. ಕೆಲಸ ಪ್ರಾರಂಭಿಸಿದಲ್ಲಿ ನಮ್ಮ ಸಿಬ್ಬಂದಿ ಅಲ್ಲೆ ಇದ್ದು ನೀರಿನ ಪೈಪಲೈನ್ ರಿಪೇರಿ ಮಾಡುತ್ತಾರೆ ಎಂದು ಪಿ.ಡಬ್ಲ್ಯೂಡಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆ.
ಕೆ.ಬಿ.ಪಾಟೀಲ, ಮುಖ್ಯಾಧಿಕಾರಿ ಪ.ಪಂ ಮಲ್ಲಾಪೂರ ಪಿಜಿ.