ಲೋಕದರ್ಶನ ವರದಿ
ಯರಗಟ್ಟಿ 26: ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದಕ್ಕೆ ಸುಪ್ರಿಂ ಕೋರ್ಟ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಸಂತಸ ತಂದಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತ್ರತ್ವದಲ್ಲಿ ನಿಯೊಗವಂದು ದೇಹಲಿಗೆ ತೆರಳಿ ಬೇಗನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಆನಂದಮಾಮನಿ ಹೇಳಿದರು.
ಸಮೀಪದ ಸತ್ತಿಗೇರಿ ಜ್ಞಾನಜ್ಯೋತಿ ವಿದ್ಯಾವರ್ಧಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶ್ರೀ ಜಗದ್ಗುರು ವೀರಗಂಗಾಧರ ಪ್ರಾಥಮಿಕ ಮತ್ತು ಪ್ರೌಡ ಶಾಲೆ ಹಾಗೂ ಶ್ರೀ ರಾಮಲಿಂಗೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಈ ಬಾಗದ ರೈತರ ಬಹುದಿನಗಳ ಬೇಡಿಕೆಯಾದ ಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು ಬರುವ ಅಧಿವೇಶನದಲ್ಲಿ ಚರ್ಚಿಸಿ ಯೋಜನೆ ಜಾರಿಗೆ ತರಲಾಗುವುದು ಮತ್ತು ಶಾಲಾ ಆವರಣದಲ್ಲಿ ಶ್ರೀ ಜಗದ್ಗುರು ವೀರಗಂಗಾಧರ ಪುತ್ತಳಿ ನಿರ್ಮಿಸಲಾಗುವುದು ಎಂದರು.
ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಅಕ್ಷರ ಕಲಿಕೆಯ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದರು. ಶಾಸಕ ಆನಂದ ಮಾಮನಿ ಅವರಿಗೆ ಶ್ರೀ ಜಗದ್ಗುರು ವೀರಗಂಗಾಧರ ಪ್ರಶಸ್ತಿ ನೀಡಲಾಯಿತು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಹಿರೇಮಠ ಕಟಕೋಳ ಎಂ.ಚಂದರಗಿ ತಪೋಭೂಷಣ ವೀರಭದ್ರ ಶಿವಾಚಾರ್ಯ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಬಿ.ಎನ್.ನಾರಗುಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗ್ರಾ.ಪಂ.ಅಧ್ಯಕ್ಷ ಈರಣ್ಣ ಸಂಗಪ್ಪನವರ ದಶಮಾನೋತ್ಸವ ಸ್ಮರಣಿಕೆ ಉದ್ಘಾಟಿಸಿದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಮಳಿಮಲ್ಲೇಶ್ವರ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ಈರಣ್ಣ ಚಂದರಗಿ, ಗೌಡಪ್ಪ್ಪ ಸವದತ್ತಿ, ಪರ್ವತಗೌಡ ಪಾಟೀಲ, ಮಕ್ತುಮಸಾಬ ಬಾಗವಾನ, ಬಸನಗೌಡ ಪಾಟೀಲ, ಮಹಾಂತೇಶ ಹಿರೇಮಠ ಗ್ರಾ.ಪಂ.ಸದಸ್ಯರು ಹಾಗೂ ಮುಂತಾದವರಿದ್ದರು. ಗುರು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಕಾಶ ಹೊಸಮನಿ ಸ್ವಾಗತಿಸಿದರು, ಶಿಕ್ಷಕ ಬಾಬರ ಬಾಗವಾನ ನಿರೂಪಿಸಿ ವಂದಿಸಿದರು.