ವಚನ ಸಾಹಿತ್ಯಕ್ಕೆ ಭಾರತೀಯ ಜ್ಞಾನ ಪರಂಪರೆಯೇ ಮೂಲ : ಸದಾಶಿವಾನಂದ ಸ್ವಾಮೀಜಿ

Indian knowledge heritage is the source of Vachana literature: Sadashivananda Swamiji

ವಚನ ಸಾಹಿತ್ಯಕ್ಕೆ ಭಾರತೀಯ ಜ್ಞಾನ ಪರಂಪರೆಯೇ ಮೂಲ :  ಸದಾಶಿವಾನಂದ ಸ್ವಾಮೀಜಿ 


ಗದಗ  21 : ಭಾರತದ ಸುದೀರ್ಘ ಜ್ಞಾನ ಪರಂಪರೆಯು ಪ್ರತಿ  ಹಂತದಲ್ಲಿಯೂ ವಿಕಸನಗೊಳ್ಳುತ್ತಾ ಬಂದಿದೆ.  ಅಂತಹ ವಿಕಾಸದ ಹಾದಿಯ ಬೆಳಕಿನ ಮೂಲದಲ್ಲಿಯೇ ವಚನಗಳು ರಚಿತಗೊಂಡಿರುವವೆಂದು ಸದಾಶಿವಾನಂದ ಸ್ವಾಮೀಜಿ ತಿಳಿಸಿದರು.  

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಐ.ಸಿ.ಪಿ.ಆರ್  ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ?ಭಾರತೀಯ ಜ್ಞಾನ ಪರಂಪರೆಗೆ ವಚನ ಸಾಹಿತ್ಯದ ಕೊಡುಗೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮುಂದುವರೆದು ಮಾತನಾಡಿದ ಜನರು ತಮ್ಮ ಅನುಭವಗಳನ್ನು ಜನರಿಗಾಗಿ ರಚಿಸಿರುವ ಸಾಹಿತ್ಯವೇ ವಚನ. ಜ್ಞಾನ  ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮವೇ ವಚನ. ಇವುಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿರುವುದರಿಂದ ವಚನಗಳು ಕನ್ನಡದ ವೇದ ಎಂದು ಕರೆಯಲ್ಪಡುತ್ತವೆ. ವಚನಗಳು ಸುಲಿದಿರುವ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುವಂಥವುಗಳು. ಶರಣ ಸಂಸ್ಕೃತಿ ಜಗತ್ತಿನಲ್ಲಿ ಕಂಡರಿಯದ ಅದ್ಭುತ ಸಂಸ್ಕೃತಿ. ಸಮಾಜದ ಅವಗುಣಗಳನ್ನು ತೆಗೆದು ಸಮಾಜವನ್ನು ಉದ್ಧರಿಸುವ ಶಕ್ತಿ ವಚನಗಳಿಗಿವೆ ಎಂದರು.  


ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಗೋವಿಂದಪ  

 ಗೌಡಪ್ಪಗೋಳರು ಮಾತನಾಡಿ ಜಗತ್ತಿನ ಜ್ಞಾನ ಭಂಡಾರಕ್ಕೆ ಕನ್ನಡಿಗರು ಕೊಟ್ಟ ಕಾಣಿಕೆಯೇ ವಚನ ಸಾಹಿತ್ಯ. 12ನೇ ಶತಮಾನದಲ್ಲಿಹೊಸ ಸಮಾಜ ನಿರ್ಮಿಸುವ ಉದ್ದೆಶ ಹೊಂದಿದ ವಚನಕಾರರು, ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆಗಳು, ತಾರತಮ್ಯ ಶ್ರೆಣಿಕೃತ ಸಮಾಜ ಶೋಷಣೆ ಎಲ್ಲದರ ವಿರುದ್ಧ ಹೋರಾಟ ಮಾಡುವ ಮೂಲಕ ಶರಣರು ತಮ್ಮ ಆದರ್ಶಗಳನ್ನು ವಚನಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ವಚನಸಾಹಿತ್ಯ ಮಾನವಿಯ ಸಾಹಿತ್ಯ, ವಚನಸಾಹಿತ್ಯ ಅನುಭಾವ ಸಾಹಿತ್ಯ. ಅದೊಂದು ಜೀವನ ಸಾಹಿತ್ಯ, ವಚನಗಳು ಕುಳಿತು ಬರೆದ ಕಾವ್ಯಗಳಲ್ಲ, ತಲೆಯಿಂದಾಡಿದ ಮಾತುಗಳಲ್ಲ, ಹೃದಯದ ಕುಲುಮೆಯಲ್ಲಿ ಪಕ್ವಗೊಂಡು ಎದೆಯ ಪರದೆಯ ಮೇಲೆ ಮೂಡಿಬಂದ ಮುಕ್ತಗಳಿವು. ಹಟತೊಟ್ಟು ಬರೆದವುಗಳಲ್ಲ, ಅಂತರಂಗದೊಳಗೆ ಇಳಿದು ಬರೆದವುಗಳು. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಶರಣರ ದಿವ್ಯ ಸಂದೇಶಗಳು ಭಾರತವನ್ನು ತುಂಬಿಕೊಂಡಿವೆ. ಮಾನವರ ಮನದ ಮೈಲಿಗೆಯನ್ನು ತೊಳಿಯುತ್ತಿವೆ. ಈ ವಚನಸಾಹಿತ್ಯದ ಪ್ರಚಾರ ಮತ್ತು ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ. ವಚನಸಾಹಿತ್ಯ ಸರ್ವಜನಾಂಗದ ಪ್ರತಿಬಿಂಬ. ಹೃದಯ ಅರಳಿಸುವ ಮನಸ್ಸು ಬೆಸೆಯುವ ದಿವ್ಯಸಾಹಿತ್ಯ ಮೂಢನಂಬಿಕೆಗಳಿಂದ ತತ್ತರಿಸಿಹೋದ ಸಮಾಜವನ್ನು ಪಾರುಮಾಡಿ ವೈಜ್ಞಾನಿಕ ತತ್ತ್ವಗಳನ್ನು ಮತ್ತು ಸತ್ಯಗಳನ್ನು ಬಿತ್ತಿದ ವೈಚಾರಿಕ ಸಾಹಿತ್ಯವಾಗಿದೆ. ಶರಣರ ಮಹಾಪ್ರಸಾದದಂತಿರುವ ಕನ್ನಡದ ಈ ವಚನ ಸಾಹಿತ್ಯ ಬಸವಾದಿ ಶಿವಶರಣರು ಅರಿವಿನಿಂದ ಅರಿತು ಆಚರಿಸಿ ಅನುಭವಿಸಿದ ಅನುಭಾವ ಸಾಹಿತ್ಯ. ವಚನಸಾಹಿತ್ಯ ಇದೊಂದು ಸಮೂಹ ಸೃಷ್ಠಿ ಎಂಬುದು ಬಲ್ಲವರ ಅಭಿಮತವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಮಾತನಾಡಿ ವಚನ ನುಡಿಗಳು ಕನ್ನಡ ಸಾಹಿತ್ಯದ ಒಡವೆಗಳು. ವಚನಸಾಹಿತ್ಯ ಕಲ್ಪವೃಕ್ಷ ದ ಕಾಡ. ಕಾಮಧೇನುವಿನ ಹಿಂಡು ಸಂಜೀವಿನಿಯ ಬಣವೆ. ಇಂತಹ ಅಮೂಲ್ಯ ಆಸ್ತಿಯ ಒಡೆಯರಾದ ನಾವು ಬಡವರಲ್ಲ. ಬಯಸಿದ್ದನ್ನು ಕೊಡುವ ಅಮೃತ ಫಲವೀಯುವ ಮರಗಳ ಅರಣ್ಯ ವಚನ ಸಾಹಿತ್ಯ ಎಂದರು. 

ಕಾರ್ಯಕ್ರಮದಲ್ಲಿ ಡಾ. ವೀಣಾ ಈ ಎಲ್ಲರನ್ನೂ ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಕು. ಮೇಘಾ ಮುದ್ದಿ ಪ್ರಾರ್ಥಿಸಿದರು. ಪ್ರೊ. ರಾಮಚಂದ್ರ ಪಡೇಸೂರು ನಿರೂಪಿಸಿದರು. ಪ್ರೊ. ಚಂದಾಲಿಂಗಪ್ಪ ಹಳ್ಳಿಕೇರಿ ಎಲ್ಲರಿಗೂ ವಂದಿಸಿದರು. ಪ್ರೊ. ಅಂದಯ್ಯ ಅರವಟಗಿಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಬೋಧಕ ಮತ್ತು ಬೋದಕೇತರ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಿದರು.