ವೆಸ್ಟ್ ಇಂಡೀಸ್ ತಂಡ ಮಣಿಸಿದ ಭಾರತ: 211 ರನ್ ಗಳ ಅಂತರದಿಂದ ಭರ್ಜರಿ ಗೆಲುವು

India defeated West Indies : a huge victory by 211 runs

ವಡೋದರಾ 23: ವಡೋದರಾದ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು 211 ರನ್ ಗಳ ಅಂತರದಿಂದ ಸೋಲಿಸಿತು.

ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 102 ಎಸೆತಗಳಲ್ಲಿ 13 ಬೌಂಡರಿ ಬಾರಿಸಿ 91 ರನ್ , ಸ್ಮೃತಿ ಮಂಧನಾ ಅವರಿಗೆ ಉತ್ತಮ ಸಾಥ್ ನೀಡಿದ್ದ ಪ್ರತೀಕಾ ರವಾಲ್ 40, ಹರ್ಲಿನಾ ಡಿಯೋಲ್ 44 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು.

ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ 34 ರನ್ ಗಳಿಸಿ ರನ್ ಔಟ್ ಆದರು. ಹೊಡಿಬಡಿ ಆಟಕ್ಕೆ ಮುಂದಾದ ರಿಚಾ ಘೋಷ್ 26 ರನ್ ಗಳಿಸಿ ಔಟಾದರೆ, ಕೊನೆಯಲ್ಲಿ ಮಿಂಚಿದ ಜೆಮಿಮಾ ರಾಡ್ರಿಗಸ್ 31 ರನ್ ಬಾರಿಸಿದರು.

ಹೀಗೆ ಉತ್ತಮ ಆರಂಭ ಪಡೆದ ಭಾರತ ತಂಡಕ್ಕೆ ಕೊನೆಯಲ್ಲಿ ದೀಪ್ತಿ ಶರ್ಮಾ ಔಟಾಗದೆ 14, ಸೈಮಾ ಠಾಕೂರ್ 4, ತೀತಸ್ ಸಾಧು 4, ಪ್ರಿಯಾ ಮಿಶ್ರಾ 1 ರನ್ ಗಳಿಸಿದರು. ಇದರೊಂದಿಗೆ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ಭಾರತ ನೀಡಿದ 315 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿಯರಿಗೆ ಭಾರತದ ರೇಣುಕಾ ಸಿಂಗ್ ಇನ್ನಿಲ್ಲದೆ ಕಾಡುವ ಮೂಲಕ ಆರಂಭಿಕ ಐದು ವಿಕೆಟ್ ಪಡೆದರು. 10 ಓವರ್ ಮಾಡಿದ ರೇಣುಕಾ 29 ರನ್ ಗಳಿಗೆ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉಳಿದಂತೆ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರೆ ದೀಪ್ತಿ ಶರ್ಮಾ ಮತ್ತು ತೀತಸ್ ಸಾಧು ತಲಾ 1 ವಿಕೆಟ್ ಪಡೆದರು. ಇದರೊಂದಿಗೆ ಭಾರತ 211 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ರೇಣುಕಾ ಸಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.