ರಕ್ಷಣೆ, ಗಣಿ ವಲಯದ ಸಹಕಾರಕ್ಕಾಗಿ ಭಾರತ, ಜಾಂಬಿಯಾ ಒಪ್ಪಂದ

  ನವದೆಹಲಿ, ಆ 21             ರಕ್ಷಣೆ, ಗಣಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಪರಸ್ಪರ ಸಹಕಾರಕ್ಕಾಗಿ ಭಾರತ ಮತ್ತು ಜಾಂಬಿಯಾ ದೇಶಗಳು ಬುಧವಾರ ಸಹಿ ಹಾಕಿವೆ  

  ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾಂಬಿಯಾ ಅಧ್ಯಕ್ಷ ಎಡ್ಗರ್ ಚಗ್ವಾ ಲುಂಗು ನಡುವಿನ ನಿಯೋಗ ಮಟ್ಟದ ದ್ವಿಪಕ್ಷೀಯ ಮಾತುಕತೆಯ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ  

  ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದಕ್ಕಾಗಿ ಜಾಂಬಿಯಾ ವಿದೇಶಾಂಗ ಸಚಿವ ಜೋಸೆಫ್ ಮಲಾಂಜಿ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಸಹಿ ಹಾಕಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. 

  ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರದ ಕುರಿತ ಒಪ್ಪಂದಕ್ಕೆ ಜಾಂಬಿಯಾದ ಗಣಿ ಮತ್ತು ಖನಿಜ ಸಂಪನ್ಮೂಲ ಸಚಿವ ರಿಚಡರ್್ ಮುಸುಕ್ವಾ ಮತ್ತು ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಸಹಿ ಹಾಕಿದರು. 

  ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಒಪ್ಪಂದಕ್ಕೂ ಉಭಯ ದೇಶಗಳು ಅಂಕಿತ ಹಾಕಿವೆ.  

  ನಿಯೋಗಮಟ್ಟದ ಮಾತುಕತೆಯ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಪ್ರಧಾನಿ ಮೋದಿ, ಆರೋಗ್ಯ, ಪ್ರವಾಸೋದ್ಯಮ, ಕೃಷಿ, ಆಹಾರ ಸಂಸ್ಕರೆ ಮತ್ತು ಗಣಿ ವಿಷಯದಲ್ಲಿನ ಸಹಕಾರಕ್ಕೆ ಸಮ್ಮತಿಸಲಾಗಿದೆ ಎಂದು ಹೇಳಿದ್ದಾರೆ 

  ಪ್ರಧಾನಿ ನರೇಂದ್ರ ಮೋದಿ ಮತ್ತು ಜಾಂಬಿಯಾದ ಅಧ್ಯಕ್ಷ ಎಡ್ಗರ್ ಚಾಗ್ವಾ ಲುಂಗು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿದರು, ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ಅಭಿವೃದ್ಧಿ ಸಹಕಾರ, ಸಾಮಥ್ರ್ಯ ವೃದ್ಧಿ, ರಕ್ಷಣೆ ನವೀಕರಿಸಬಹುದಾದ ಇಂಧನದ ಕುರಿತು ಮಾತುಕತೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಟ್ವೀಟ್ ಮಾಡಿದ್ದಾರೆ 

  ಭಾರತ ಪ್ರವಾಸದಲ್ಲಿರುವ ಜಾಂಬಿಯಾ ಅಧ್ಯಕ್ಷ ಲುಂಗು,ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದರು.  ರಾಮನಾಥ್ ಕೋವಿಂದ್ ಕಳೆದ ವರ್ಷ 2018ರ ಏಪ್ರಿಲ್ ನಲ್ಲಿ ಜಾಂಬಿಯಾ ದೇಶಕ್ಕೆ ಭೇಟಿ ನೀಡಿದ್ದರು.