ಲೋಕದರ್ಶನ ವರದಿ
ಇಂಡಿ 08: ಶಿರಶ್ಯಾಡ, ನಾದ, ಸಂಗೋಗಿ ಗೋಳಸಾರ ಸೇರಿದಂತೆ ವಿವಿದ ಗ್ರಾಮಗಳ ಹಳ್ಳ ಹಾಗೂ ಬಂದರುಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಇಂಡಿ-ಸಿಂದಗಿಗೆ ಹೊಗುವ ರಾಜ್ಯ ಹೆದ್ದಾರಿ ಮಾರ್ಗದಲ್ಲಿರುವ ನಾದ ಕೆಡಿ ಗ್ರಾಮದಲ್ಲಿ ರಸ್ತೆ ತಡೆದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹಾಗೂ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ಮಾಡಿದರು.
ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಶಿರಶ್ಯಾಡ, ನಾದ, ಸಂಗೋಗಿ, ಗೋಳಸಾರ ಸೇರಿದಂತೆ ವಿವಿಧ ಗ್ರಾಮದಲ್ಲಿರುವ ಬಾಂಧಾರ ಹಾಗೂ ಹಳ್ಳಗಳಿಗೆ ಕಾಲುವೆ ಮೂಲಕ ನೀರು ಹರಿಸಿ, ಗ್ರಾಮೀಣ ಪ್ರದೇಶದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ತಮ್ಮಲ್ಲಿ ಹಲವಾರು ಬಾರಿ ಮನವಿ ಮಾಡಿಕೊಂಡರು ಅಧಿಕಾರಿ ವರ್ಗ ಇಲ್ಲಿಯವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ.
ತಾಲೂಕಿನ ಮಿರಗಿ, ಹಂಚನಾಳ, ಅರ್ಜುಣಗಿ ಗೋಳಸಾರ, ಶಿರಶ್ಯಾಡ, ಸಂಗೋಗಿ, ರೋಡಗಿ ಸೇರಿದಂತೆ ಈ ಭಾಗದಲ್ಲಿ ಭೀಕರ ಬರಗಾಲವಿದ್ದು, ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಅಧಿಕಾರಿಗಳು ರೈತರ ಜೀವನದ ಜೊತೆ ಆಟ ಆಡುತ್ತಿದ್ದೀರಿ, ಈ ಮೊಂಡು ದೋರಣೆ ಸರಿಯಲ್ಲ ಇದು ಖಂಡನೀಯ ಎಂದರು.
ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಮಾತನಾಡಿ, ಸದ್ಯ ಈ ಭಾಗದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದ್ದು, ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ಹನಿ ನೀರು ಬರುತ್ತಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಳ್ಳ, ಬಾಂದಾರಗಳು ಬತ್ತಿ ಹೋಗಿವೆ. ಜಾನುವಾರು ಮೇಯಿಸಲು ಹೊಲ, ಗದ್ದೆಗಳಿಗೆ ಹೋದರೆ ಒಂದು ಹನಿ ನೀರು, ಮೇವು ಸಿಗುತ್ತಿಲ್ಲ. ಹೀಗಾಗಿ ಜಾನುವಾರುಗಳು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ರೈತರು ಇದ್ದಾರೆ. ಈ ಭಾಗದ ಜೀವನಾಡಿಯಾದ ಹಳ್ಳ, ಬಾಂದಾರಗಳು ನೀರಿಲ್ಲದೆ ಬತ್ತಿ ಹೋಗಿವೆ. ಸ್ವಲ್ಪ ಪ್ರಮಾಣದಲ್ಲಿ ಆದರೂ ಬಾಂಧಾರ, ಹಳ್ಳಕ್ಕೆ ಕಾಲುವೆ ನೀರು ಹರಿಸಿದರೆ ಅಂತರ್ಜಲ ಮಟ್ಟ ಜಾಸ್ತಿಯಾಗುತ್ತದೆ. ಆದ್ದರಿಂದ ಸಂಬಂಧ ಪಟ್ಟವರು ಕೂಡಲೆ ಬಾಂದಾರುಗಳಿಗೆ ನೀರು ಹರಿಸಿ ಈ ಭಾಗದ ರೈತರ ಹಿತ ಕಾಪಾಡಬೇಕು ಎಂದರು.
ಈ ಸಂದರ್ಭದಲ್ಲಿ ರಾಂಪೂರ ಕೆಬಿಜೆಎನ್ಎಲ್ ಅಧಿಕಾರಿ ಅನಂತರಾಮು ಮುಗಳೆ ಧರಣಿ ನಿರತ ಜನರ ಬಳಿ ಹೋಗಿ ನಾನೆ ಸ್ವತಹ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ. ಇಂದು ರಾತ್ರಿಯೇ ಹಳ್ಳ ಹಾಗೂ ಬಾಂದಾರ್ಗಳಿಗೆ ನೀರು ಹರಿಸುತ್ತೇನೆ ಎಂದು ವಿನಂತಿಸಿದಾಗ ಧರಣಿ ಅಂತ್ಯಗೊಂಡಿತು.
ಧರಣಿಯಲ್ಲಿ ಪೈಗಂಬರ ದೇಸಾಯಿ, ಮಹೇಶ ಹೂಗಾರ, ಸಿದ್ದು ತಳವಾರ, ಶ್ರೀಶೈಲ ಬಿರಾದಾರ, ಯಂಕನಗೌಡ ಪಾಟೀಲ, ದಾದು ಕೋಣಸಿರಸಗಿ, ಧರ್ಮರಾಜ ಕಲ್ಲೂರ, ರಾವೂಸಾಬ ಗೊದಳಿ, ಸಂತೋಶ ಮುಳಜಿ, ಶಿವಾನಂದ ಹತ್ತಿ, ರಾಜು ಪಾಟೀಲ, ಸಂಜು ಬೂದಿಹಾಳ, ಚಂದ್ರು ಪಾಸೋಡಿ, ದತ್ತು ಹಿರೇಮಠ, ಉಮೇಶ ಬಡಿಗೇರ, ಯಶವಂತ ತೆಲಗ, ಬಸವರಾಜ ಕೋಣಸಿರಸಗಿ, ಸಂತೋಶ ಬಬಲೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು