ಉಚಿತ ಟ್ಯೂಶನ್ ಕ್ಲಾಸ್ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ರಾಯಬಾಗ 02: ಗ್ರಾಮೀಣ ಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಅವರ ಮಾರ್ಗದರ್ಶನದಲ್ಲಿ ರಾಜ್ಯದ ಪ್ರತಿಯೊಂದು ತಾಲೂಕಿನ 5 ಗ್ರಾಮಗಳ 5 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಕ್ಲಾಸ್ ನಡೆಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧ.ಗ್ರಾ.ಯೋ. ತಾಲೂಕು ಯೋಜನಾಧಿಕಾರಿ ಪುರಂದರ ಪೂಜಾರಿ ಹೇಳಿದರು. 

ಸೋಮವಾರ ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಕ್ಲಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಶನ್ ಕ್ಲಾಸ್ ಹೇಳುವ ಶಿಕ್ಷಕರಿಗೆ ಧರ್ಮಸ್ಥಳ ಸಂಘದಿಂದ ಮೂರು ತಿಂಗಳ ವರೆಗೆ ಗೌರವ ಧನ ನೀಡಲಾಗುತ್ತಿದೆ. ಅಲ್ಲದೇ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ನೀಡುತ್ತಿದ್ದಾರೆ.ಬಡ ವಿದ್ಯಾಥರ್ಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಇವುಗಳ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. ಜನ ಜಾಗೃತಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಒಳ್ಳೆ ನಡೆ, ನುಡಿ, ಸಂಸ್ಕೃತಿ ಕಲಿತು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮಗೆ ಕಠಿಣ ವಿಷಯಗಳ ಕಡೆಗೆ ಹೆಚ್ಚಿನ ಗಮನ ಹರಿಸಿ, ಅಧ್ಯಯನ ಮಾಡಿ ಒಳ್ಳೆ ಫಲಿತಾಂಶ ಪಡೆಯಬೇಕೆಂದು ಸಲಹೆ ನೀಡಿದರು.ಮೇಲ್ವಿಚಾರಕ ಶ್ರೀಕಾಂತ ನಾಯ್ಕ, ಪ್ರಭಾರಿ ಮುಖ್ಯೋಪಾಧ್ಯಾಯ ಎಮ್.ಎಸ್.ಕೋಟಿ, ಶಿಕ್ಷಕರಾದ ಎಮ್.ಬಿ.ಕುಂಬಾರ, ಕೆ.ಡಿ.ತೋಳೆ, ಅನುಸೂಯಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಜಿ.ಟಿ.ನಾಯಿಕ ಸ್ವಾಗತಿಸಿದರು, ಕೆ.ವಿ.ಖೋತ ನಿರೂಪಿಸಿ, ವಂದಿಸಿದರು.