ವಾಮನರಾವ ದೇಶಪಾಂಡೆ ಜನಕಲ್ಯಾಣ ಪ್ರತಿಷ್ಠಾನ ಉದ್ಘಾಟನೆ

Inauguration of Vamanarao Deshpande Janakalyan Pratishthan

ಅಥಣಿ 30: ಸಂಬರಗಿಯ ವಾಮನರಾವ ದೇಶಪಾಂಡೆ ಐದು ದಶಕಗಳ ಕಾಲ ಆರ್‌.ಎಸ್‌.ಎಸ್ ಮತ್ತು ಪರಿವಾರದ ಸಂಘಟನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಶ್ರಮಿಸಿದ ಇವರ ಜೀವನ ನಮಗೆಲ್ಲ ಮಾದರಿ ಎಂದು ಆರ್‌.ಎಸ್‌.ಎಸ್ ಹಿರಿಯ ಸ್ವಯಂಸೇವಕ ಮುರಲಿಧರ ದೇಶಪಾಂಡೆ ಹೇಳಿದರು. ಅವರು ಸಂಬರಗಿ ಗ್ರಾಮದಲ್ಲಿ ವಾಮನರಾವ ದೇಶಪಾಂಡೆ ಜನಕಲ್ಯಾಣ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡುತ್ತಿದ್ದರು.   

ಯಾವುದೇ ಅಧಿಕಾರದ ಆಸೆಯ ಹಿಂದೆ ಬಿಳದ ವಾಮನರಾವ ದೇಶಪಾಂಡೆ  ತಮ್ಮ ಮನೆಯ ಕೆಲಸದಂತೆಯೇ ಆರ್‌.ಎಸ್‌.ಎಸ್, ಬಿಜೆಪಿ, ವಿಶ್ವಹಿಂದು ಪರಿಷತ್ ಸೇರಿದಂತೆ ಅನೇಕ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಬೆಳವಣಿಗೆಗೆ ತಮ್ಮ ಜೀವನದ ಬಹುಪಾಲು ಸಮಯ ಕೊಟ್ಟಿದ್ದಾರೆ ಎಂದ ಅವರು ಸಂಬರಗಿ ಗ್ರಾಮದಲ್ಲಿಯೂ ಯಾವುದೇ ಜಾತಿ, ಧರ್ಮ ಎನ್ನದೆ ಎಲ್ಲರೊಂದಿಗೆ ಸೌಹಾರ್ದದಿಂದ ಬದುಕಿದ್ದ ಇವರು ಅಂಚೆ ಪತ್ರ ಬರೆದುಕೊಡುವ, ಓದುವದರಿಂದ ಹಿಡಿದು ಎಲ್ಲ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಹೀಗಾಗಿ ಇಂದಿಗೂ ಅವರು ಆರ್‌.ಎಸ್‌.ಎಸ್ ಕಾರ್ಯಕರ್ತರ, ಸಂಬರಗಿ ಗ್ರಾಮಸ್ಥರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ ಎಂದು ಹೇಳಿದರು.  

ಸಮಾಜದಲ್ಲಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದ ವಾಮನರಾವ ದೇಶಪಾಂಡೆ ಇವರ ಹೆಸರಿನಲ್ಲಿ ಜನಕಲ್ಯಾಣ ಪ್ರತಿಷ್ಠಾನ ಪ್ರಾರಂಭಿಸಲಾಗಿದ್ದು, ಈ ಮೂಲಕ ಸಂಬರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೈಕ್ಷಣಿಕ, ವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ, ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಥಣಿ ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಮಾತನಾಡಿ,  ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ವಾಮನರಾವ ದೇಶಪಾಂಡೆಯವರ ಹೆಸರಿನಲ್ಲಿ ಪ್ರಾರಂಭಗೊಂಡ ಜನಕಲ್ಯಾಣ ಪ್ರತಿಷ್ಠಾನ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಾಮನರಾವ ದೇಶಪಾಂಡೆಯವರ ಹೆಸರನ್ನು ಅಚ್ಚಳಿಯದಂತೆ ಉಳಿಸಬೇಕು ಎಂದರು.   

ಗೋಕಾಕದ ಆರ್‌ಎಸ್‌.ಎಸ್ ಕಾರ್ಯಕರ್ತ ಶ್ರೀಧರ ಮಾತನಾಡಿದರು. ಡಾ.ಪ್ರಸಾದ ದೇಶಪಾಂಡೆ ಸರ್ವರನ್ನು ಸ್ವಾಗತಿಸಿದರು, ಡಾ.ಅತುಲ ದೇಶಪಾಂಡೆ ವಂದಿಸಿದರು, ಅರುಣ ದೇಶಪಾಂಡೆ, ಅಂಜು ಶಾಸ್ತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.