ಚನ್ನಮ್ಮನ ಕಿತ್ತೂರು 13: ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಶನಿವಾರ ದಿ. 14 ರಂದು ಸಾಯಂಕಾಲ 4 ಗಂಟೆಗೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ,ಬೆಳಗಾವಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಶನಿವಾರದಂದು ಕಿತ್ತೂರಿನಲ್ಲಿ ಉದ್ಘಾಟನೆಯ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಲಕರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮ ಉದ್ಘಾಟಿಸಿ “ಕನ್ನಡ ಕಾವ್ಯದ ಬಹುತ್ವದ ನೆಲೆಗಳು" ಕುರಿತು ವಿಷಯ ಮಂಡಿಸುವರು. ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಪ್ರಜ್ಞಾ ಮತ್ತಿಹಳ್ಳಿ “ಹಳಗನ್ನಡ ಕಾವ್ಯಗಳಲ್ಲಿ ರಸಗ್ರಹಣದ ಮಹೋನ್ನತಿ" ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಚನ್ನಮ್ಮನ ಕಿತ್ತೂರಿನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳೂ, ಬೆಳಗಾವಿ ಜಿಲ್ಲಾ ಚಕೋರ ವೇದಿಕೆಯ ಸಂಚಾಲಕರೂ ಆಗಿರುವ ಎಲ್.ಎಸ್.ಶಾಸ್ತ್ರಿ ವಹಿಸುವರು.
ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟರ್ ಕರಿಯಪ್ಪ ಎನ್, ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ, ಕಿತ್ತೂರಿನ ಎಸ್.ಬಿ.ಎಮ್.ಸರಕಾರಿ ಬಾಲಿಕಿಯರ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾದ ಮಹೇಶ ಚನ್ನಂಗಿ, ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಮತ್ತು ಬೆಳಗಾವಿ ಜಿಲ್ಲಾ ಚಕೋರ ವೇದಿಕೆಯ ಸಂಚಾಲಕರೂ, ಕವಿಗಳೂ, ವಿಮರ್ಶಕರೂ ಆಗಿರುವ ನಾಗೇಶ ಜೆ.ನಾಯಕ ಮತ್ತು ಇತರರು ಉಪಸ್ಥಿತರಿರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತ್ಯಾಸಕ್ತರು ಮತ್ತು ಕಿತ್ತೂರ ನಾಡಿನ ಸಾಹಿತ್ಯ ಅಭಿಮಾನಿಗಳು ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.