ಸಂಗೀತದಿಂದ ಮನುಷ್ಯನ ಆರೋಗ್ಯ ವೃದ್ಧಿ: ಶಾಂತಾದೇವಿ ಹುಲೆಪ್ಪನವರಮಠ

ಬೆಳಗಾವಿ 30: ಸಂಗೀತವು ಎಲ್ಲರಿಗೂ ಅರ್ಥ ವಾಗುವ ಜಗತ್ತಿನ ಸುಂದರ ಭಾಷೆ.  ಲತಾ ಅವರು ಹಲವು ಭಾಷೆಗಳ ಸಂಗೀತ ಸುಧೆಯನ್ನು  ಉಣಬಡಿಸಿ ಸುಮಧುರ ಧ್ವನಿಯಾಗಿ   ನಮ್ಮೊಂದಿಗೆ ಇದ್ದಾರೆ. ಅವರ ಹಾಡು ಕೇಳುವುದೇ ಒಂದು ಸೌಭಾಗ್ಯ, ಆ ಸೌಭಾಗ್ಯ ವನ್ನು ಬೆಳಗಾವಿಯ ಬೆಳ್ಳಿಚುಕ್ಕಿ  ಸಂಸ್ಥೆಯ ಬಳಗವು ದೊರಕಿಸಿ ಕೊಟ್ಟಿರುವುದು ವಿಶೇಷ, ಆ ಶ್ರೇಷ್ಠ ಗಾಯಕಿಗೆ ಗೌರವ ಸೂಚಿಸುತ್ತಿರುವುದು ಸಂತಸ ತಂದಿದೆ  ಎಂದು ರಾಷ್ಟ್ರ , ರಾಜ್ಯ ಪ್ರಶಸ್ತಿ ವಿಭೂಷಿತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ  ಹೇಳಿದರು.

ನಗರದ ಕನ್ನಡ ಭವನದಲ್ಲಿ  ಬೆಳ್ಳಿಚುಕ್ಕಿ ಅಕಾಡೆಮಿ ಮತ್ತು ಕನ್ನಡ ಭವನ ಇವುಗಳ ಸಹಯೋಗದಲ್ಲಿ ಗಾನ ಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ ಅವರ ಜನ್ಮ ದಿನದ ಪ್ರಯುಕ್ತ  "ಲತಾ ಲಹರಿ ರಸ ಮಂಜರಿ"  ಕಾರ್ಯಕ್ರಮವನ್ನು ಉದ್ಘಾಟಿಸಿ,  ಲತಾ ಮಂಗೇಶ್ಕರ  ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಂಗೀತಕ್ಕೆ ಮಾರು ಹೋಗದವರೇ ಇಲ್ಲ.ನಮ್ಮನ್ನು ರಂಜಿಸುವ ಶಕ್ತಿ  ಸಂಗೀತಕ್ಕಿದೆ,  ನಾವು ಸಂಗೀತವನ್ನು ಆಲಿಸುವುದರಿಂದ ಹಾಗೂ ಹಾಡುವುದರಿಂದ ದೇಹದ ಚೆ?ತನ್ಯ ಶಕ್ತಿ ವೃದ್ಧಿಸುತ್ತದೆ. ಹಾಗೇ ಲತಾ ಮಂಗೇಶ್ಕರ  ಅವರು ಸಂಗೀತ ಹಾಡಿದರೆ ಮಳೆಯೇ ಬರುತ್ತದೆ ಅಂತಹ ಶಕ್ತಿ ಈ ಸಂಗೀತಕ್ಕೆ ಇದೆ ಎಂದು ತೊರಿಸಿ ಕೊಟ್ಟವರು.

ಸುಧೀಂದ್ರ ಕುಲಕರ್ಣಿ ಅವರು ಮಾತನಾಡಿ,  ಜಗತ್ತಿನ ಹಲವಾರು ಭಾಷೆ ಗಳ ಗೀತೆಗಳನ್ನು ಹಾಡಿದ ಖ್ಯಾತ ಗಾಯಕಿ ಲತಾ ಅವರ ಮಧುರ ಕಂಠದ ಗಾಯನವು ದೇಶ ಭಾಷೆ ಗಳನ್ನು ಮೀರಿ ಸಂತಸವನ್ನು  ನೀಡುತ್ತಿದೆ ಎಂದರು.ಚಾರಿತ್ರಿಕ ಕಾದಂಬರಿಕಾರ ಯ.ರು.ಪಾಟೀಲ ಅವರು ಮಾತನಾಡಿ,  ಲತಾ ಅವರ ಗುಣ ಗೌರವ ದೊಡ್ಡದು. ಕಿತ್ತೂರು ಚನ್ನಮ್ಮನ ಬಲಗೈ ಬಂಟ ಕ್ರಾಂತಿ ವೀರ ಸಂಗೊಳ್ಳಿ  ರಾಯಣ್ಣನ ಚಿತ್ರದಲ್ಲಿ ಹಾಡಿದ್ದಕ್ಕೆ ಸಂಭಾವನೆಯನ್ನು ಪಡೆಯದೇ  ನಾಡ ರಕ್ಷಣೆಗೆ ದೇಹ ತೆತ್ತ  ಅಂತಹ  ವೀರ ಪುರುಷ ನನ್ನು ನೆನೆವುದೇ ದೊಡ್ಡ ಸಂಭಾವನೆ ಎಂದರು.ಈ ವೇಳೆ ಲತಾ ಲಹರಿ ಕಾರ್ಯಕ್ರಮದ ಸಂಯೋಜಕಿ  ಬೆಳ್ಳಿ ಚಿಕ್ಕಿ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಅವರ ಸಂಗೀತ ಸೇವೆಯ ಪ್ರಶಂಸೆಯನ್ನು ಒಳಗೊಂಡ ಸ್ವರಚಿತ ಕವನವನ್ನು  ಶಾಂತಾದೇವಿ ಅವರು ವಾಚಿಸಿದರು.

ಈ ಸಂದರ್ಭದಲ್ಲಿ ಡಾ. ಬಸವರಾಜ ಜಗಜಂಪಿ ನ್ಯಾಯವಾದಿ ಬಸವರಾಜ ಹಿರೇಮಠ ಲೇಖಕಿಯರ ಸಂಘದ ಸದಸ್ಯರು ಹಾಗೂ ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು