ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಮಟ್ಟ ಸುಧಾರಣೆ: ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ

Improvement of economic level of people through guarantee schemes: District President KE Chidanandap

 ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಮಟ್ಟ ಸುಧಾರಣೆ: ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ  

ಬಳ್ಳಾರಿ 22: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎಲ್‌ಇಡಿ ವಾಹನ ಹಾಗೂ ಬೀದಿ ನಾಟಕದ ಮೂಲಕ ಗ್ಯಾರಂಟಿ ಯೋಜನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಬಡ ಜನರು, ಮಧ್ಯಮ ವರ್ಗದ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಲು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಆರ್ಥಿಕ ಶಕ್ತಿ ತುಂಬಿದ್ದಾರೆ ಎಂದರು. 

ರಾಜ್ಯದಲ್ಲಿ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಶೇ.98 ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಶೇ.100 ರಷ್ಟು ಅನುಷ್ಠಾನಗೊಳಿಸಲು ಯೋಜನೆಗಳ ಅರಿವು ಅಗತ್ಯವಾಗಿದೆ. ಹಾಗಾಗಿ ಎಲ್‌ಇಡಿ ವಾಹನವು ಬೀದಿ ನಾಟಕ ಕಾರ್ಯಕ್ರಮ ಆಯೋಜಿಸುವ ಕಲಾವಿದರ ತಂಡದೊಂದಿಗೆ ಜಿಲ್ಲೆಯ ಆಯ್ದ 20 ಗ್ರಾಮಗಳಲ್ಲಿ ಸಂಚರಿಸಿ ಗ್ರಾಮೀಣ ಭಾಗದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಮಾಹಿತಿ ನೀಡಿದರು. 

ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಯಾವುದೇ ಮಧ್ಯವರ್ತಿಗಳಿಲ್ಲದೇ ಜನರಿಗೆ ತಲುಪಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಅರ್ಹರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಕುರಿತ ಅರಿವು ಬಹುಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೂಡಿಸಬೇಕು ಎಂದರು. 

ಗೃಹಲಕ್ಷ್ಮಿ ಯೋಜನೆಯ ಕಳೆದ 16 ತಿಂಗಳ ಎಲ್ಲಾ ಕಂತಿನ ಹಣವನ್ನು ಗೃಹಲಕ್ಷ್ಮೀಯರ ಖಾತೆಗೆ ಜಮೆ ಮಾಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಳೆದ 3 ತಿಂಗಳ ಗೃಹಲಕ್ಷಿ ಹಣ ಬಂದಿಲ್ಲ. ಈಗಾಗಲೇ ಮುಖ್ಯಮಂತ್ರಿಯವರು, ಇಲಾಖಾ ಸಚಿವರು ಮುಂದಿನ ದಿನಗಳಲ್ಲಿ ಹಣ ಪಾವತಿಸುವ ಕುರಿತು ತಿಳಿಸಿದ್ದಾರೆ ಎಂದರು. 

ಅದೇರೀತಿಯಾಗಿ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಬದಲಾಗಿ ನೀಡುವ ಹಣವು ಜಮೆಯಾಗಿಲ್ಲ. ಬಾಕಿ ಇರುವ ಹಣ ಪಾವತಿ ಜೊತೆಗೆ ಮುಂದಿನ ತಿಂಗಳಿನಿಂದ ಎಲ್ಲಾ ಅರ್ಹ ಪಡಿತರಿಗೆ ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು. 

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ಕಡ್ಡಾಯವಾಗಿ ತಲುಪಿಸಬೇಕೆಂಬ ಬದ್ಧತೆಯನ್ನು ಹೊಂದಿದೆ. ತಲುಪಿಸುವಲ್ಲಿ ವಿಳಂಬವಾಗಬಹುದು. ಈ ಕುರಿತು ಜನರು ಉಹಾಪೋಹಗಳಿಗೆ ಕಿವಿಕೊಡಬಾರದು ಎಂದರು. 

ಈ ವೇಳೆ ಮುಖಂಡರಾದ ವೆಂಕಟೇಶ್ ಹೆಗಡೆ, ಲಿಂಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಸಿ.ಗುರುರಾಜ, ಸಿಬ್ಬಂದಿ ಹನುಮೇಶ್‌.ಹೆಚ್‌.,  ಕಲಾವಿದರಾದ ಎಸ್‌.ಎಂ.ಹುಲುಗಪ್ಪ, ಹೆಚ್‌.ಜಿ.ಸುಂಕಪ್ಪ, ಡಿ.ಹೇಮಂತ್, ಎರಿ​‍್ರಸ್ವಾಮಿ, ಹನುಮಯ್ಯ ತಿಮ್ಮಲಾಪುರ ಹಾಗೂ ಇತರರು ಇದ್ದರು.