ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ರಾಜು ಕಾಗೆ

I am a ministerial aspirant: MLA Raju Kage

ಅಥಣಿ 29: ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ನನಗೂ ಸಚಿವ ಸ್ಥಾನ ಕೊಡಿ ಎಂದು ಸಿಎಮ್ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯರ ಎದುರು ನನ್ನ ಬೇಡಿಕೆ ಮಂಡಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.  

ಅವರು ಕಾಗವಾಡ ಮತಕ್ಷೇತ್ರದ ಕಲ್ಲೋತಿ, ತಾಂವಶಿ, ನಾಗನೂರ, ಪಾಂಡೇಗಾಂವ, ಶಿರೂರ, ಸಿದ್ಧೇವಾಡಿ, ಮೋಳೆ, ಕಾತ್ರಾಳ ಮತ್ತು ಬಣಜವಾಡ ಗ್ರಾಮಗಳಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.       ಕಾಗವಾಡ ಕ್ಷೇತ್ರದಲ್ಲಿ 5 ಬಾರಿ ಶಾಸಕನಾಗಿ ಆಯ್ಕೆಯಾದ ನನಗೂ ಸಚಿವ ಸ್ಥಾನ ಬೇಕು ಎಂದು ಈಗಾಗಲೇ ಪಕ್ಷದ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ನನ್ನಂತೆಯೇ ಅಥಣಿ ಮತಕ್ಷೇತ್ರದ ಶಾಸಕರಾಗಿರುವ ಲಕ್ಷ್ಮಣ ಸವದಿಯವರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಒಂದು ವೇಳೆ ಸವದಿಯವರಿಗೆ ಸಚಿವ ಸ್ಥಾನ ಕೊಡುವುದಾದಲ್ಲಿ ಅವರಿಗೆ ನಾನು ಬೆಂಬಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.        

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಬೇಕು ಎನ್ನುವ ಸಮಾಜದ ಬೇಡಿಕೆಗೆ ಪಂಚಮಸಾಲಿ ಸಮಾಜದ ಎಲ್ಲ ಶಾಸಕರಾದ ನಾವು ಬೆಂಬಲಿಸುತ್ತೇವೆ ಎಂದ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಶಾಸಕರೆಲ್ಲರೂ ಸೇರಿಕೊಂಡು ಸಮಾಜದ ಸ್ವಾಮೀಜಿಯವರ ನೇತೃತ್ವದಲ್ಲಿ ಸಿಎಮ್ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಆಗ್ರಹಿಸಿ ಅತೀ ಶೀಘ್ರದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವ ಮೂಲಕ ಸಮಾಜದ ಬಡ, ಮಧ್ಯಮ ವರ್ಗದವರಿಗೆ ಅನಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ಕಾಗವಾಡ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಕೆಲ ರಸ್ತೆಗಳ ಅನುಷ್ಠಾನಕ್ಕೆ ರೈತರು ಅಡ್ಡಿ ಪಡಿಸುತ್ತಿದ್ದಾರೆ ಇದರಿಂದ ಕಾಮಗಾರಿಗಳ ಅನುಷ್ಠಾನಕ್ಕೆ ಅಡತಡೆಯಾಗುತ್ತಿದ್ದು, ಗ್ರಾಮದ ಪಂಚಾಯತ ಸದಸ್ಯರು, ಹಿರಿಯರು ಕೂಡಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಿ ರಸ್ತೆ ಕಾಮಗಾರಿಗಳನ್ನು ಸುಗಮಗೊಳಿಸಿ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಪರ್ಕ ರಸ್ತೆಗಳನ್ನು ಅನುಷ್ಠಾನಗೊಳಿಸುವೆ ಎಂದರು. 

ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಘೂಳಪ್ಪ ಜತ್ತಿ, ರಾವಸಾಬ ಐಹೊಳೆ, ಮಲ್ಲಿಕಾರ್ಜುನ ದಳವಾಯಿ, ಅಣ್ಣಾಸಾಹೇಬ ಮೀಸಾಳ, ರವಿಕಾಂತ ಪಾಟೀಲ, ರಾಮು ತೇಲಿ, ಬಸವರಾಜ ಅಸ್ಕಿ, ಅಪ್ಪು ಹಿಪ್ಪರಗಿ, ಗಣಪತಿ ಮರಗಾಳೆ, ಸುನೀಲ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.