ಯೋಧ ಮಹೇಶ ಮರೇಗೊಂಡ ದುರ್ಮರಣ : ನಾಳೆ ಅಂತ್ಯ ಸಂಸ್ಕಾರ

Hurt by the death of Soldier Mahesh: Minister RB Thimmapur

ಯೋಧ ಮಹೇಶನ ಸಾವಿನಿಂದ ಘಾಸಿಯಾಗಿದೆ : ಸಚಿವ ಆರ್‌.ಬಿ.ತಿಮ್ಮಾಪುರ 

*ವರದಿ: ಹನಮಂತ ನಾವಿ  

ಮಹಾಲಿಂಗಪುರ 25: ವೀರಯೋಧ ಮಹೇಶ ಮರೇಗೊಂಡ ಅವರ ದುರ್ಮರಣ ದೇಶಕ್ಕೆ ತುಂಬಲಾರದ ನಷ್ಟ, ಅವರ ಸಾವಿನ ಸುದ್ದಿಯಿಂದ ತುಂಬಾ ಘಾಸಿಯಾಗಿದೆ, ಕುಟುಂಬದ ಆಕ್ರಂದನ ಮನಕಲಕುತ್ತಿದೆ, ಸರ್ಕಾರದಿಂದ ಸಿಗಬೇಕಾದ ಸಕಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. 

ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಸೇನಾ ವಾಹನ ಕಂದಕಕ್ಕೆ ಬಿದ್ದ ದುರ್ಘಟನೆಯಲ್ಲಿ ಮರಣಹೊಂದಿದ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿ ನಿವಾಸಿ ವೀರಯೋಧ ಮಹೇಶ ನಾಗಪ್ಪ ಮರೇಗೊಂಡ(25) ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಶ್ಮೀರದಿಂದ ಹೊರಟಿರುವ ಮೃತದೇಹ ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸ್ವಗ್ರಾಮ ತಲುಪಲಿದ್ದು ಅಧಿಕಾರಿಗಳು ಮತ್ತು ಸ್ಥಳೀಯ ಹಿರಿಯರೊಂದಿಗೆ ಚರ್ಚಿಸಿ ಅಂತ್ಯ ಸಂಸ್ಕಾರದ ಸ್ಥಳ ಮತ್ತು ಸಮಯ ನಿಗದಿಪಡಿಸಲಾಗುವುದು ಎಂದರು. 

ಕುಟುಂಬದ ಭವಿಷ್ಯವೇ ಕಂದಕಕ್ಕೆ ಜಾರಿದಂತಾಗಿದೆ : ಸೈನಿಕನಾಗಿ ದೇಶ ಸೇವೆ ಮಾಡುವ ಕನಸು ಕಂಡಿದ್ದ ಮಹೇಶ 8ನೇ ತರಗತಿಯಿಂದಲೇ ನಿತ್ಯ ಬೆಳಿಗ್ಗೆ 10ಕಮೀ ದೂರದ ರಬಕವಿವರೆಗೆ ಓಡಿ, ಜಿಮ್ ಮಾಡಿ ಕೊನೆಗೂ ತಮ್ಮ ಆಸೆ ಈಡೇರಿಕೊಂಡು 6 ವರ್ಷಗಳ ಹಿಂದೆ 11 ನೇ ಮರಾಠ ಎಲಿಫೆಂಟ್ರಿ ಬೆಟಾಲಿಯನ್‌ನಿಂದ ಸೈನ್ಯಕ್ಕೆ ಸೇರಿ ಜಮ್ಮು, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದರು. 3 ವರ್ಷಗಳ ಹಿಂದೆ ಲಕ್ಷಿ??ಯೊಂದಿಗೆ ವಿವಾಹವಾಗಿ ಕಾಶ್ಮೀರದಲ್ಲ್ಲಿ ಪತ್ನಿಯೊಂದಿಗೆ ವಾಸವಿದ್ದರು, ಕೇವಲ 3 ದಿನಗಳ ಹಿಂದೆ ಕಾಶ್ಮೀರದಿಂದ ಗಂಡನ ಮನೆ ತಲುಪಿದ್ದ ಪತ್ನಿ ಲಕ್ಷಿ??ಯಿಂದ ಶಾಶ್ವತವಾಗಿ ದೂರವಾಗಿದ್ದು ಇನ್ನೂ ಪತ್ನಿ ಮತ್ತು ತಾಯಿಗೆ ಮಹೇಶನ ಸಾವಿನ ಸುದ್ದಿ ತಿಳಿಸಿಲ್ಲ.ಮಹೇಶನ ನೌಕರಿಯಿಂದ ಪುಟ್ಟ ಆಶ್ರಯ ನಿರ್ಮಿಸಿಕೊಂಡಿದ್ದ ಕಂದಕಕ್ಕೆ ಬಿದ್ದು ಬಾರದ ಲೋಕಕ್ಕೆ ತೆರಳಿದ ಮಹೇಶನ ಕುಟುಂಬದ ಭವಿಷ್ಯವೇ ಕಂದಕಕ್ಕೆ ಜಾರಿದಂತಾಗಿದೆ. 

ಅನಾಥವಾದ ಕುಟುಂಬ : ಅತ್ಯಂತ ಕಡುಬಡತನದಲ್ಲೇ ಬೆಳೆದ ಮಹೇಶ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ, ತಂದೆ ನಾಗಪ್ಪ ವಿಧಿವಶರಾಗಿದ್ದು, ತಾಯಿ ಶಾರದಾ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ, ತಂಗಿ ವಿದ್ಯಾಶ್ರೀ (22) ಬಿ.ಕಾಂ.ಪದವೀಧರೆ ಅವಳ ಮದುವೆಯ ಜವಾಬ್ದಾರಿ, ಸಹೋದರ ಸಂತೋಷ(21) ಪಿಯು ವಿದ್ಯಾರ್ಥಿ ಇವರ ನೆಲೆ ಒದಗಿಸುವ ಜವಾಬ್ದಾರಿ, ಅಮ್ಮನ ಹಾರೈಕೆಯ ಜವಾಬ್ದಾರಿ ಇತ್ತು, ಈಗ ಮಹೇಶನ ಅಕಾಲಿಕ ಮರಣ ಇಡೀ ಕುಟುಂಬ ಅನಾಥವಾದಂತಾಗಿದೆ.  

ಅಜ್ಜಿ ರುಕ್ಮವ್ವ ಆಕ್ರಂದನ ಮುಗಿಲು ಮಟ್ಟಿದ್ದು ಮೃತನ ಮಾವಂದಿರಾದ ರಂಗಣ್ಣ ಮರೇಗುದ್ದಿ, ರಮೇಶ ಮರೇಗುದ್ದಿ, ಸಹೋದರರಾದ ಮಹಾಲಿಂಗ ಮರೇಗೊಂಡ, ಲಕ್ಷ??ಣ ಮರೇಗೊಂಡ ಸಾಂತ್ವಾನ ಮಾಡಲು ಹೆಣಗಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. 

ನಾಳೆ ಬೆಳಿಗ್ಗೆ ಸ್ವಗ್ರಾಮ ತಲುಪಲಿರುವ ಪಾರ್ಥಿವ ಶರೀರ : ಮೃತ ದೇಹ ಪೂಂಚ್‌ನಿಂದ ಮಿಲಿಟರಿ ವಾಹನದ ಮೂಲಕ ಈಗಾಗಲೇ ಜಮ್ಮು ತಲುಪಿದ್ದು, ವಿಮಾನದ ಮೂಲಕ ರಾತ್ರಿ 12ಕ್ಕೆ ಬೆಳಗಾವಿ ತಲುಪಿ ಬೆಳಗಾವಿಯ 11ನೇ ಮರಾಠ ರೆಜಿಮೆಂಟ್‌ನಲ್ಲಿ ಗೌರವ ನಮನದ ನಂತರ ಬೆಳಿಗ್ಗೆ 9ಕ್ಕೆ ಸ್ವಾಗ್ರಾಮ ತಲುಪಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನದ ನಂತರ ಮೆರವಣಿಗೆ ಮತ್ತು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಶಾಸಕ ಸಿದ್ದು ಸವದಿ ಸಂತಾಪ : ವೀರಯೋಧನ ಸಾವಿನ ಸುದ್ದಿ ತಿಳಿದ ಶಾಸಕ ಸಿದ್ದು ಸವದಿ ಪಟ್ಟಣಕ್ಕೆ ಆಗಮಿಸಿ ಸಂತಾಪ ಸೂಚಿಸಿದರು. ಚಿಕ್ಕವಯಸ್ಸಿನ ವೀರಯೋಧನ ಮರಣ ತುಂಬಾ ನೋವಾಗಿದೆ ಇದು ದೇಶಕ್ಕೆ ತುಂಬಲಾರದ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. 

ಎಸ್ಪಿ ಅಮರನಾಥ ರೆಡ್ಡಿ, ತಹಶಿಲ್ದಾರ್ ಗೀರೀಶ ಸ್ವಾದಿ, ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ವಾರ್ಡ್‌ ಸದಸ್ಯ ಶೇಖರ ಅಂಗಡಿ, ಮುಖಂಡರಾದ ಡಾ.ಎ.ಆರ್‌.ಬೆಳಗಲಿ, ಪ್ರವೀಣ ಪಾಟೀಲ, ಆನಂದ ಹಟ್ಟಿ, ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಇತರರಿದ್ದರು.