ಬೆಂಗಳೂರು, ಮೇ 2,ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದು ಸಮಯ ಕಳೆಯಲು ಪರಿತಪಿಸುತ್ತಿರುವ ಹಾಗೂ ತಾರಸಿ ತೋಟ ಕೃಷಿ ಬಗ್ಗೆ ಆಸಕ್ತಿ ಹೊಂದಿರುವವರಿಗಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆನ್ಲೈನ್ ಮೂಲಕ ತರಬೇತಿ ಕೋರ್ಸ್ ಆರಂಭಿಸಿದೆ. ಬಗೆಬಗೆಯ ತರಕಾರಿ, ತರೆವಾರಿ ಹೂವುಗಳು, ಸೌಗಂಧಿಕ ಪುಷ್ಪಗಳು, ಔಷಧೀಯ ಸಸ್ಯಗಳು, ಎಲೆ ಬಳ್ಳಿಗಳು, ಹಣ್ಣು, ತರಕಾರಿಗಳ ಬೆಳೆಗಳನ್ನು ಮನೆಯ ಮಹಡಿಯಲ್ಲಿ ಹೇಗೆ ಬೆಳೆಯಬಹುದು ಎನ್ನುವ ಕುರಿತು ಸಂಸ್ಥೆ ಆನ್ ಲೈನ್ ಮೂಲಕ ತರಬೇತಿ ನೀಡಲಿದೆ.
ಆನ್ಲೈನ್ ಮೂಲಕ ತರಬೇತಿ ಕಾರ್ಯಕ್ರಮವನ್ನು ಸದ್ಯದಲ್ಲೇ ಆರಂಭಿಸುತ್ತಿದ್ದು, ಮನೆ ತಾರಸಿ ಮೇಲೆ ತೋಟ ನಿರ್ಮಿಸುವ ಆಸಕ್ತರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವೆಬ್ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.ತಾರಸಿ ತೋಟದಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯುವ ವಿಧಾನ, ಮಣ್ಣು, ಅಡುಗೆ ಮನೆಯಲ್ಲಿಯೇ ಉತ್ಪಾದನೆಯಾಗುವ ತ್ಯಾಜ್ಯವನ್ನು ಹೇಗೆ ಬಳಸಬಹುದು, ಬಗೆಬಗೆಯ ತೋಟಗಾರಿಕಾ ಚಟುವಟಿಕೆ ಕುರಿತು ತಜ್ಞರು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಿದ್ದಾರೆ ಎಂದು ಐಐಎಚ್ಆರ್ ನಿರ್ದೇಶನ ಎಂ.ಅರ್. ದಿನೇಶ್ ತಿಳಿಸಿದ್ದಾರೆ. ಐಐಎಚ್ಆರ್ ವೆಬ್ ಸೈಟ್ ನಲ್ಲಿ ಈ ಕುರಿತು ಮಾಹಿತಿ ಇದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ತಾರಸಿ ತೋಟ ದಿಂದ ಮನೆಯ ವಾತಾವರಣದಲ್ಲಿ ಗಮನಾರ್ಹ ಸುಧಾರಣೆಯಾಗಲಿದ್ದು, ಹವಾಮಾನ ಬದಲಾವಣೆಗೂ ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.