ಲೋಕದರ್ಶನ ವರದಿ
ಹೊಸಪೇಟೆ 03: ಪಪೂ ಶಿಕ್ಷಣ ಇಲಾಖೆ ಕೈಗೊಂಡಿರುವ ವಿಶ್ವಾಸ ಕಿರಣ ತರಬೇತಿ ಕಾರ್ಯಾಗಾರ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಜೆ.ಸಿದ್ರಾಮ ಹೇಳಿದರು.
ನಗರದ ಕಾಲೇಜಿನಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಾಸ ಕಿರಣ ಆಂಗ್ಲ ಭಾಷೆ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ಕಠಿಣವಾಗಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ 50 ಅಂಕಗಳ ವ್ಯಾಕರಣ ಇರುವುದರಿಂದ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದ ಸಂಯೋಜಕ ಡಾ.ದಯಾನಂದ ಕಿನ್ನಾಳ್ ಮಾತನಾಡಿ, ರಾಜ್ಯದಲ್ಲಿ 411 ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂಗ್ಲಿಷ್ ಬಲ್ಲ ಸಂಪನ್ಮೂಲ ವ್ಯಕ್ತಿಗಳಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲ, ಅನುಮಾನಗಳಿದ್ದರೆ ನಿವಾರಿಸಿಕೊಳ್ಳಬೇಕು. ಡಿಸೆಂಬರ್ವರೆಗೆ ಪ್ರತಿ ಭಾನುವಾರ ಕಾರ್ಯಾಗಾರ ನಡೆಯಲಿದ್ದು, ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಿ.ಜಂಬುನಾಥ, ವೆಂಕಟೇಶಲು, ವೀರಭದ್ರಗೌಡ, ಬಿ.ಮಂಜುನಾಥ, ಗೋವಿಂದ ಇತರರಿದ್ದರು. 431 ವಿದ್ಯಾಥರ್ಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.