ಹೋಮ ಹವನ, ದೇಗುಲ ದರ್ಶನದ ಮೊರೆ ಹೋದ ಡಿ.ಕೆ.ಶಿವಕುಮಾರ್

ಬೆಂಗಳೂರು, ಜೂ.14,ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪದಗ್ರಹಣಕ್ಕೆ ಎದುರಾಗಿರುವ ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿ ಸುಸೂತ್ರವಾಗಿ ಕಾರ್ಯಕ್ರಮ ನಡೆಯುವಂತಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿದ್ದು, ಇಂದಿನಿಂದ ಎರಡು ದಿನ ಕಾಲ ಅವರು ಹೋಮ ಹವನ, ದೇಗುಲ ದರ್ಶನದಲ್ಲಿ ತೊಡಗಿಕೊಂಡಿದ್ದಾರೆ.ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ನಡೆಯುತ್ತಿರುವ ಹೋಮದಲ್ಲಿ ಶಿವಕುಮಾರ್ ಭಾಗಿಯಾಗಿದ್ದಾರೆ. ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದ ಮೂವರು ಅರ್ಚಕರಿಂದ ಹೋಮ ನಡೆಯುತ್ತಿದ್ದು, ಗಣಪತಿ  ಹೋಮ, ವಾಸ್ತು ಹೋಮಾ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ  ಹೋಮ,ಅಷ್ಟ ಲಕ್ಷ್ಮಿ ಹೋಮ ,ಗಾಯಿತ್ರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ ಒಟ್ಟು 8 ಬಗೆಯ ಹೋಮಗಳನ್ನು ನಡೆಸಲಾಗುತ್ತಿದೆ. 

ನೂತನ ಆಡಿಟೋರಿಯಂ ಉದ್ಘಾಟನೆ  ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಿನ್ನೆಲೆ ಹೋಮ ಹಮ್ಮಿಕೊಂಡಿದ್ದು,  ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಇದನ್ನು ನಡೆಸಲಾಗುತ್ತಿದೆ.ಭಾನುವಾರ ಬೆಳಿಗ್ಗೆ ಆರಂಭವಾದ ಹೋಮ ಬೆಳಿಗ್ಗೆ 11 ಗಂಟೆಗೆ ಪೂರ್ಣಾಹುತಿ ನಡೆಯಲಿದ್ದು, ಹೋಮದ ನಂತರ ತಮಿಳುನಾಡಿನ ಅರುಣಾಚಲೇಶ್ವರನ ದರ್ಶನ ಪಡೆಯಲು ಅವರು ತೆರಳಲಿದ್ದಾರೆ.ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಸೇರಿದಂತೆ ಇತರ ಕೆಲವು ನಾಯಕರು ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ನೊಣವಿನಕೆರೆ ಅಜ್ಜಯ್ಯನಮಠದ ಶ್ರೀಗಳ ಸಲಹೆಯಂತೆ ಈ ಹೋಮ ನಡೆಯುತ್ತಿದೆ. ಪಾದಾರ್ಪಣೆ ಕಾರ್ಯಕ್ರ‌ಮಕ್ಕೂ ಮುನ್ನ ಹೋಮ ನಡೆಸುವಂತೆ ಶ್ರೀಗಳು ಇತ್ತೀಚೆಗೆ ಸಲಹೆ ನೀಡಿದ್ದರು. ಯಾವುದೆ ವಿಘ್ನಗಳು ಎದುರಾಗಬಾರದು, ಅದಕ್ಕಾಗಿ ಹೋಮ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದರು. 

ಹೋಮದ ಬಳಿಕ ಶಿವಕುಮಾರ್ ಅವರು ನೋಣವಿನಕೆರೆಯ ಅಜ್ಜಯ ಪೀಠಕ್ಕೂ ಭೇಟಿ ನೀಡುವ ಸಾಧ್ಯತೆ ಇದ್ದು, ಬಳಿಕ ಸಂಜೆ ತಮಿಳುನಾಡಿನ ತಿರುವಣಾಮಲೈನಲ್ಲಿರುವ ಅರುಚಲೇಶ್ವರ ದರ್ಶನಕ್ಕೆ ಡಿಕೆಶಿ ಕುಟುಂಬ ತೆರಳಲಿದೆ. ಅರುಣಾಚಲೇಶ್ವರ ದೇಗುಲಕ್ಕೆ ಭೇಟಿ ನೀಡಿ ನಾಳೆ ಮುಂಜಾನೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.ಪೌರ್ಣಿಮೆಯಲ್ಲಿ ಪೂಜೆ ಸಲ್ಲಿಸಿದರೆ ವಿಶೇಷ ಶಕ್ತಿ ಲಭಿಸಲಿದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ತಿರುವಣ್ಣಾಮಲೈಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೆಪಿಸಿಸಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ಮಾತನಾಡಿ, ಎಲ್ಲಾ ವಿಘ್ನಗಳನ್ನು ನಿವಾರಣೆಯಾಗಲಿ ಎಂಬ ಉದ್ದೇಶವಿಟ್ಟುಕೊಂಡು ಶುಭ ಮೂಹೂರ್ತದಲ್ಲಿ ಪೂಜೆ  ಆರಂಭಿಸಿದ್ದೇವೆ. ಎರಡು ವರ್ಷಗಳಿಂದ ಕಟ್ಟಡದ ನಿರ್ಮಾಣ ಕೆಲಸ ನಿಂತಿತ್ತು. ಎಲ್ಲರ ಒಳಿತಿಗಾಗಿ ಈ  ಹೋಮ ನೆರವೇರಿಸಲಾಗುತ್ತಿದೆ. ರಾಜ್ಯಕ್ಕೆ,  ನಮ್ಮ ಪಕ್ಷದ  ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ, ರಾಜ್ಯ ಆದಷ್ಟು ಬೇಗ ಕೊರೋನಾದಿಂದ ಮುಕ್ತವಾಗಲಿ ಎಂದು ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.ಕೆಪಿಸಿಸಿ ಅಧ್ಯಕ್ಷ ಪದಗ್ರಹಣಕ್ಕೆ ಸದ್ಯದಲ್ಲೇ ದಿನಾಂಕ ನಿಗದಿ ಮಾಡಲಾಗುವುದು. ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ‌ ಚರ್ಚೆ ಮಾಡಿ, ದಿನಾಂಕ ನಿಗದಿ ಮಾಡುತ್ತೇನೆ ಎಂದರು.ಲಾಕ್ ಡೌನ್‌ ಮುಂದುವರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಇದರ ಬಗ್ಗೆ ತಾವೇನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದನ್ನು ಪಾಲಿಸುತ್ತೇನೆ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ, ಎಲ್ಲಾ ಅವರು ತೀರ್ಮಾನ ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೇವೆ ಎಂದರು.ಹೋಮ ಹವನದ ನಡುವೆ ಮಂಗಳಮುಖಿಯರಿಗೆ ಡಿ.ಕೆ. ಶಿವಕುಮಾರ್ ಕಾಣಿಕೆ ನೀಡಿದರು. ನೂತನ ಕಚೇರಿಯಲ್ಲಿ ಹೋಮ ಹವನ ಪೂಜೆ ನಡುವೆ ತಮ್ಮನ್ನು ಹರಸಲು ಬಂದ ಮಂಗಳ ಮುಖಿಯರಿಗೆ ಕಾಣಿಕೆ ನೀಡಿದರು. ತಮ್ಮ ಕಿಸೆಯಿಂದ 500ರೂ.ಗಳ ಬಂಡಲ್ ತೆಗೆದು ಉದಾರ ಕಾಣಿಕೆ ನೀಡಿದರು. ಪ್ರತಿಯಾಗಿ ಡಿಕೆಶಿಗೆ ಒಳಿತಾಗಲೆಂದು ಹರಸಿ, ಕಾಣಿಕೆ ಪಡೆದು ಮಂಗಳ ಮುಖಿಯರು ಹೊರಟು ಹೋದರು.