ಬೆಟಗೇರಿಯಲ್ಲಿ ಸಂಭ್ರಮದಿಂದ ನಡೆದ ಬಣ್ಣದಾಟ

Holi Celebration- Betageri- Gokak

ಬೆಟಗೇರಿ 15: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕಾಮಣ್ಣನ ದಹನ ಹಾಗೂ ಬಣ್ಣದಾಟ ದಿನವಾದ ಮಾರ್ಚ.15ರಂದು ರಂಗು ರಂಗಿನ ಬಣ್ಣದೊಕುಳಿ ಸಡಗರ, ಸಂಭ್ರಮದಿಂದ ನಡೆಯಿತು. 

ಬೆಳಗ್ಗೆ 6 ಗಂಟೆಗೆ ಸಂಪ್ರದಾಯದಂತೆ ಗ್ರಾಮದ ಹಿರಿಯರು ಗ್ರಾಮದ ದಲಿತ ಕೇರಿಯ ಕಾಮಣ್ಣನ ದಹನಕ್ಕೆ ಚಾಲನೆ ನೀಡಿದ ಬಳಿಕ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿ ಬೆರಣಿ, ಕಟ್ಟಿಗೆ ಸಂಗ್ರಹಿಸಿದನ್ನು ಒಟ್ಟಿಗೆ ಸೇರಿಸಿ ಕಾಮ ದಹನಕ್ಕೆ ಪ್ರತಿಷ್ಠಾಪಿಸಲ್ಪಟ್ಟ ಕಾಮಣ್ಣನ ದಹನ ಮಾಡಲಾಯಿತು. ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಕಾಮ ದಹನ ಕಾರ್ಯಕ್ರಮದಲ್ಲಿ ಇದ್ದರು.  

ಕಾಮದಹನದಲ್ಲಿರುವ ಬೆಂಕಿಯುಕ್ತ ಕುಳ್ಳ ಮನೆತಂದು ಕಡಲೆ ಬೀಜ ಸುಟ್ಟು ತಿಂದು, ತೆಂಗಿನ ಕೊಬರಿಯ ಸುಟ್ಟು ಕಾಮಕರಿಯನ್ನು ಸ್ಥಳೀಯರು ಹಣೆಗೆ ನಾಮಕೂರೆದುಕೊಂಡು ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ರಾಸಾಯನಿಕಯುಕ್ತ ಬಣ್ಣ ಬಳಿಕೆ ಹಾಗೂ ಮಧ್ಯ ಸೇವನೆಗೆ ಕಡಿವಾಣ ಹಾಕಿರುವ ಸಂಗತಿ ಗ್ರಾಮದೆಲ್ಲೆಡೆ ಕಾಣುತ್ತಿತ್ತು. ಎರಡು ದಿನಗಳ ಕಾಲ ಗ್ರಾಮದ ನಾಗರಿಕರು, ಯುವಕರು, ಹೊಳಿ ಹಬ್ಬದ ಪ್ರಯುಕ್ತ ಹಂತಿ, ಲವಾಣಿ ಪದ ಒಬ್ಬರಿಗೊಬ್ಬರು ಜಿದ್ದಾ ಜಿದ್ದಿಯಾಗಿ ಹಾಡಿ ಕೇಳುಗರ ಮನ ರಂಜಿಸಿದರು. 

ಗ್ರಾಮದ ಎಲ್ಲೆಡೆ ಹೋಳಿ ಹಬ್ಬದ ಪ್ರಯುಕ್ತ ಯುವಕರು, ಮಕ್ಕಳಿಂದ ಹಲಗೆ, ತಮಟೆಯ ನಿನಾದ ಬಲು ಜೋರಾಗಿತ್ತು. ಇಲ್ಲಿಯ ಎಲ್ಲ ಸಮುದಾಯದ ಹಿರಿಯರು, ಯುವಕರು, ಮಕ್ಕಳು, ಪುರುಷರು, ಮಹಿಳೆಯರು ಬಣ್ಣದೊಕುಳಿಯಲ್ಲಿ ಪಾಲ್ಗೊಂಡು ಒಬ್ಬರಿಗೊಬ್ಬರು ಬಣ್ಣ ಎರಚಿ ಬಣ್ಣದೊಕುಳಿಯಲ್ಲಿ ರಂಗು ರಂಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು ಮಿಂದೆದ್ದು ಸಂಭ್ರಮಿಸಿ ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬವನ್ನು ಸ್ಥಳೀಯರು ಆಚರಿಸಿದರು.