ಲೋಕದರ್ಶನ ವರದಿ
ಇಂದಿನಿಂದ ಬೆನಕಟ್ಟಿ ಐತಿಹಾಸಿಕ ದುರ್ಗಾದೇವಿ ಜಾತ್ರಾ ಮಹೋತ್ಸವ
ಯರಗಟ್ಟಿ 27 : ಮಲಪ್ರಭಾ ಎಡದಂಡೆ ಕಾಲುವೆ ಹತ್ತಿರ ಹಚ್ಚ ಹಸಿರು ಪೈರಿನ ಮದ್ಯೆ ಕಂಗೊಳಿಸುತ್ತಿವರ ಶ್ರೀ ದುರ್ಗಾದೇವಿ ದೇವಸ್ಥಾನವು ಭಕ್ತರ ಪಾಲಿನ ನೆಮ್ಮದಿಯ ತಾಣ. ತನ್ನನ್ನು ನಂಬಿದವರನ್ನು ದುರ್ಗಾ ಮಾತೆ ಎಂದಿಗೂ ಕೈಬಿಡುವದಿಲ್ಲವೆಂದು ಭಕ್ತರು ನಂಬಿದ್ದಾರೆ. ಇಲ್ಲಿನ ದುರ್ಗಮ್ಮ ರಾಜ್ಯದ ಅಸಂಖ್ಯಾತರ ಭಕ್ತರ ಪಾಲಿನ ಆರಾಧ್ಯೆ ದೇವತೆಯಾಗಿದ್ದಾಳೆ.
ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುವದಾಗಲಿ, ಸೊಸೆ ಕರೆತರುವಾಗ, ಹೊಲಗಳಿಗೆ ಬಿತ್ತನೆ ಮಾಡುವಾಗ ಶ್ರೀ ದೇವಿಯ ಗದ್ದುಗೆಯಲ್ಲಿ ಹೂವು ಹಚ್ಚಲಾಗುತ್ತದೆ. ಹೂವುಯಾವ ದಿಕ್ಕಿಗೆ ಬೀಳುತ್ತದೆ ಎಂಬುದು ಹಾಗೂ ಪಲ್ಲಕ್ಕಿಯಿಂದ ಪ್ರಸಾದ ಪಡೆಯುವ ಮೂಲಕ ವರ ಬೇಡಲಾಗುತ್ತದೆ.
ಇತಿಹಾಸ: ಗ್ರಾಮದ ಮಟಗೇರ ಕುಂಟುಂಬದವರು ಮನೆ ನಿರ್ಮಿಸುವಾಗ ಮಲೆನಾಡಿನಿಂದ ಎತ್ತಿನ ಬಂಡಿಯಲ್ಲಿ ಕಟ್ಟಿಗೆ ತರುತ್ತಿದ್ದರಂತೆ. ಆಗ ಬಂಡಿ ಹಿಂಭಾರವಾಯಿತು ಮರದ ಬುಡದಲ್ಲಿದ್ದ ಶಿಲೆ ರೂಪದ ಕಲ್ಲೊಂದನ್ನು ಎತ್ತಿಕೊಂಡು ಬಂಡಿಯ ಮುಂಭಾಗದಲ್ಲಿ ಇಟ್ಟುಕೊಂಡು ಬಂದರು. ಮಟಗೇರಿ ಕುಟುಂಬದವರು ಶಿಲೆಯ ರೂಪದ ದೇವಿಯನ್ನು ತಿಳಿಯದೇ ತಮ್ಮ ಮನೆಯ ಸ್ನಾನದ ಮೂಲೆಯಲ್ಲಿಟ್ಟು ಮನೆ ಕಟ್ಟಿದರು.
ಇದರ ಪರಿಣಾಮ ಆ ಕುಟುಂಬಕ್ಕೆ ಅನೇಕ ಕಾಯಿಲೆಗಳು, ಮನೆಯೊಳಗೆ ವಿಷ ಜಂತುಗಳು ಬರಲು ಪ್ರಾರಂಭ ಮಾಡಿದವು. ಇದರಿಂದ ಚಿಂತೆ ತಲೆಧೋರಿತು. ಬಳಿಕ ಅವರು ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿಯ ಗ್ರಾಮದ ಅಲ್ಲಯ್ಯ ಸ್ವಾಮಿಗಳ ಹತ್ತಿರ ಸಮಸ್ಯೆ ಹೇಳಿಕೊಂಡರು. ನಿಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಒಂದು ಕಲ್ಲು ಇಟ್ಟು ಅದರ ಮೇಲೆ ನೀವು ಸ್ನಾನ ಮಾಡುತ್ತಿದ್ದಿರಿ. ಅದು ಸಾಮಾನ್ಯ ಕಲ್ಲಲ್ಲ. ಅದು ಶ್ರೀದೇವಿ ರೂಪ ತಾಳಿದ ಶಿಲೆ. ಆ ಶಿಲೆಯ ರೂಪದಲ್ಲಿರುವ ದೇವಿಯ ಮೂರ್ತಿಯನ್ನು ಪೂಜಿಸಿ ಎಂದು ಸಲಹೆ ನೀಡಿದರಂತೆ. ನಂತರ ದಿನಗಳಲ್ಲಿ ಕಲ್ಲಿನ ಶಿಲೆಯನ್ನು ಸ್ಥಾಪಿಸಿದ ನಂತರ ಅವರ ಕಷ್ಟಗಳು ಕರಗಿ ಹೋದವು. ಅಕ್ಕ ದುರ್ಗಮ್ಮ, ತಂಗಿ ಮರೆಮ್ಮ ಎಂದು ನಾಮಾಂಕಿತ ಇಟ್ಟು ಪೂಜಿಸಿದರು. ಹೀಗೆ ಬೆನಕಟ್ಟಿಯಲ್ಲಿ ದುರ್ಗಾದೇವಿ ನೆಲೆಗೊಂಡಳು ಎಂದು ಇತಿಹಾಸ ಇಲ್ಲಿ ಕಾಣಬಹುದು. ಪ್ರತಿ ಅಮಾವಾಸ್ಯೆಯಂದು ದೇವಸ್ಥಾನದಲ್ಲಿ ಅನ್ನದಾಸೋಹ ನಡೆಯುತ್ತದೆ.
ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ 28 ರಂದು ಮುಂಜಾನೆ ದುರ್ಗಾದೇವಿಯ ರುದ್ರಾಭಿಷೇಕದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವದು, ಸಾಯಂಕಾಲ 4 ಗಂಟೆಗೆ ದೇವಿಯ ಫಲ್ಲಕ್ಕಿ ಮಹೋತ್ಸವವು ಮದ್ಲೂರಿಗೆ ಹೊರಡುವದು, ರಾತ್ರಿ ಡೊಳ್ಳಿನ ಹಾಗೂ ಭಜನಾ ಪದ ಗಾಯನ ಜರುಗುವದು.
ಮಾ.1 ರಂದು ಮದ್ಯಾಹ್ನ 3 ಗಂಟೆಗೆ ಬಸವೆಶ್ವರ ದೇವಸ್ಥಾನದ ಆವರಣದಲ್ಲಿ ಡೋಳ್ಳಿನ ಓಲಗ ಹಾಗೂ ಕರಡಿ ಮೇಳದವರಿಂದ ಕಲಾ ಪ್ರದರ್ಶನ ಮತ್ತು ಜಾನಪದ, ಭಜನಾಪದ ಗಾಯನ ಜರಗುವವು. ಸಂಜೆ 4 ಗಂಟೆಗೆ ಫಲ್ಲಕ್ಕಿಯು ಮದ್ಲೂರಿನಿಂದ ಮರಳುವುದು. ನಂತರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಸಂಚರಿಸುವುದು. ಭಕ್ತರು ಕಾಣಿಕೆ ಸಲ್ಲಿಸುವರು. ರಾತ್ರಿ 10 ಗಂಟೆಗೆ ಮಹಾಪ್ರಸಾದ ಜರುಗುವುದು.
ಮಾ.2 ರಂದು 51 ಜೋಡಿ ಸಾಮೂಹಿಕ ವಿವಾಹ ಜರಗುವದು ನಂತರ ಕರಡಿ ಮಜಲು ಡೊಳ್ಳಿನ ಓಲಗದವರಿಂದ ಕಲಾ ಪ್ರದರ್ಶನ ಮತ್ತು ಶ್ರೀ ದೇವಿಯ ಪ್ರಸಾದ ವಿತರಣೆ ಜರುಗುವುದು. ನಂತರ ಭಂಡಾರ ಒಡೆಯುವದು. ರಾತ್ರಿ 8:30 ಗಂಟೆಗೆ ಕಲಾವಿದರಿಂದ ಹರದೇಶಿ ಮತ್ತು ನಾಗೇಶಿ ತುರುಸಿನ ಡೊಳ್ಳಿನ ಪದಗಳು ಜರಗುವವು.
ಮಾ.3 ರಂದು ರಾತ್ರಿ 9.30ಕ್ಕೆ ಚೌಡಕ್ಕಿ ಪದಗಳು ಜರಗುವವು, ರಾತ್ರಿ ಸಾವಿರಾರು ಭಕ್ತರ ಮಧ್ಯೆ ಭಂಡಾರ ಒಡೆಯುವ ಮೂಲಕ ಜಾತ್ರೆಯು ಮಂಗಲಗೊಳ್ಳುವದು.
ಹೇಳಿಕೆ: ಶ್ರೀ ದುರ್ಗಮ್ಮ ದೇವಿ ಜಾತ್ರೆಯು ಹುಗ್ಗಿ ಜಾತ್ರೆ ಎಂದು ಪ್ರಸಿದ್ದಿ ಪಡದಿದೆ. ಅನೇಕ ಗ್ರಾಮ, ಪಟ್ಟಣ, ಜಿಲ್ಲೆ, ರಾಜ್ಯದ ಭಕ್ತರು ಆಗಮಿಸಿ ತಾಯಿಯ ಆರ್ಶೀವಾದ ಪಡೆದು ತಮ್ಮ ಹರಕೆ ತಿರಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಮಹಾದೇವ ಮುರಗೋಡ, ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕ, ಯರಗಟ್ಟಿ ತಾಲೂಕು.
ಹೇಳಿಕೆ: ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು ಹಾಗೂ ಉಳಿದುಕೊಳ್ಳಲು ವಸತಿ ಹಾಗೂ ಸಂಚಾರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಭಕ್ತರು ಎಕಕಾಲಕ್ಕೆ ಕುಳಿತುಕೊಂಡು ಪ್ರಸಾದ ಸ್ವೀಕರಿಸುವುದು ನೋಡುವುದೇ ಭಾಗ್ಯ. ಮಲ್ಲಿಕಾರ್ಜುನ ಹೆಗ್ಗನ್ನವರ. ತಹಸೀಲ್ದಾರ ಸವದತ್ತಿ