ಕಾಶ್ಮೀರ ಕಣಿವೆಯಲ್ಲಿ ಹೈಸ್ಪೀಡ್ ಇಂಟರ್ ನೆಟ್, ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತ: ವಿಪಿಎನ್ ಬಳಕೆದಾರರಿಗೆ ಡಿಜಿಪಿ ಎಚ್ಚರಿಕೆ

ಶ್ರೀನಗರ, ಫೆ 12 :  ಕೇಂದ್ರ ಸರ್ಕಾರ  370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಯುಟಿ) ವಿಭಜಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 5 ರಿಂದ ಹೈಸ್ಪೀಡ್ ಇಂಟರ್ ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ,.  

ಜನರು, ಮುಖ್ಯವಾಗಿ ಭಯೋತ್ಪಾದಕರು ವಿಪಿಎನ್ ಆ್ಯಪ್‌ಗಳನ್ನು ಬಳಸುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಗ್ ಸಿಂಗ್, ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  

ಜೆಕೆಎಲ್‌ಎಫ್ ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್  ನಿಧನ ವಾರ್ಷಿಕಾಚರಣೆಯ ಹಿನ್ನೆಲೆಯಲ್ಲಿ  ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಿಗ್ಗೆ ಎಲ್ಲಾ ಮೊಬೈಲ್ ದೂರವಾಣಿ ಕಂಪನಿಗಳ 2 ಜಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.  

1984 ರಲ್ಲಿ ಮೊಹಮ್ಮದ್ ಮಕ್ಬೂಲ್ ಭಟ್  ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಜೆಕೆಎಲ್ಎಫ್ ಅನ್ನು ನಿಷೇಧಿಸಲಾಗಿದ್ದು, ಇದರ ಮುಖ್ಯಸ್ಥ ಮೊಹಮ್ಮದ್ ಯಾಸೀನ್ ಮಲಿಕ್ ಮತ್ತು ಇತರ ಹಲವಾರು ನಾಯಕರು ಕಳೆದ ಕೆಲ ವರ್ಷಗಳಿಂದ ಬಂಧನದಲ್ಲಿದ್ದಾರೆ. ಮುಷ್ಕರಕ್ಕೆ ಕರೆ ನೀಡಿದ್ದಕ್ಕಾಗಿ ಜೆಕೆಎಲ್ ಎಫ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  

ಹೈಸ್ಪೀಡ್ ಇಂಟರ್ ನೆಟ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆ ಕಾಶ್ಮೀರದಲ್ಲಿ ಸ್ಥಗಿತಗೊಂಡಿದೆ. ಇದು  ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ವೃತ್ತಿಪರರ ಮೇಲೆ ತೀವ್ರ ಪರಿಣಾಮ ಬೀರಿದೆ.  170 ದಿನಗಳ ನಂತರ ಜನವರಿ 25 ರಂದು 2 ಜಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಮರು ಆರಂಭಿಸಲಾಗಿದ್ದರೂ ವ್ಯಾಪಾರಿಗಳು ತೊಂದರೆ ಎದುರಿಸುತ್ತಿದ್ದಾರೆ.  

2 ಜಿ ಇಂಟರ್ ನೆಟ್ ಸೇವೆ ಮರು ಆರಂಭಿಸಲಾಗಿದ್ದರೂ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. 2 ಜಿ ಸೇವೆ ವೇಗ ತುಂಬಾ ಕಡಿಮೆಯಿರುವುದರಿಂದ ಮೇಲ್ ಗಳನ್ನು ತೆರೆಯಲು ಸಹ ಸಾಧ್ಯವಾಗುತ್ತಿಲ್ಲ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.  

 ಆಗಸ್ಟ್ 5 ರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು  ಲಡಾಖ್‌ನಲ್ಲಿ ಎಲ್ಲಾ ಸಂವಹನ ಜಾಲಗಳನ್ನು ಸ್ಥಗಿತಗೊಳಿಸಿದ ನಂತರ ವಿಶೇಷವಾಗಿ ಮಾಧ್ಯಮ ಪ್ರತಿನಿಧಿಗಳು, ವೈದ್ಯರು, ವಿದ್ಯಾರ್ಥಿಗಳು ಮತ್ತು ಇತರ ವೃತ್ತಿಪರರು ಬ್ರಾಡ್‌ಬ್ಯಾಂಡ್ ಮತ್ತು ಹೈಸ್ಪೀಡ್ ಮೊಬೈಲ್ ಇಂಟರ್ ನೆಟ್ ಸೇವೆ ಲಭ್ಯವಾಗದೆ ತೊಂದರೆ ಎದುರಿಸುತ್ತಿದ್ದಾರೆ.  

ನಿನ್ನೆ 2 ಜಿ ಪುನರಾರಂಭದ ನಂತರ ಗ್ರಾಹಕರು ವಿಪಿಎನ್ ಬಳಸುತ್ತಿರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ ಎಂದು ಡಿಜಿಪಿ ಸಿಂಗ್ ಹೇಳಿದ್ದಾರೆ. ವಿಪಿಎನ್ ಬಳಸುವವರ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.