ರಾಯಬಾಗ: ಭಾರಿ ಮಳೆ: ಗ್ರಾಮಗಳಲ್ಲಿ ಪ್ರವಾಹ ಭೀತಿ

ಲೋಕದರ್ಶನ ವರದಿ

ರಾಯಬಾಗ 06: ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮತ್ತು ರಾಜ್ಯದಲ್ಲಿ ಈಗ ಎರಡು ದಿನಗಳಿಂದ ಬಿಟ್ಟು ಬಿಡದೇ ಸಿರುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ 2005ರ ಸ್ಥಿತಿ ಮರಕಳಿಸುವ ಆತಂಕಕ್ಕೆ ಜನರು ಒಳಗಾಗಿದ್ದಾರೆ.

2005 ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದು ಇಡೀ ತಾಲೂಕಿನ ನದಿ ತೀರದ ಗ್ರಾಮಗಳು ನಡೆಗಡ್ಡೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿತ್ತು. ಅದೇ ರೀತಿ ಈ ಬಾರಿಯು ನದಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ಕೃಷ್ಣಾ ನದಿ ಹರಿಯುತ್ತಿದೆ. 

ನದಿ ದಡದ ಜಮೀನುಗಳು ಈಗಾಗಲೇ ನದಿ ಪ್ರವಾಹಕ್ಕೆ ಮುಳಗಿದ್ದು, ಈಗ ಶಾಲೆ ಮತ್ತು ಮನೆಗಳು ಜಲಾವೃತ್ತಗೊಳ್ಳುತ್ತಿದ್ದು, ನದಿ ದಂಡೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ಈಗಾಗಲೇ ತಾಲೂಕು ಆಡಳಿತ ಅವಶ್ಯಕತೆ ಇದ್ದ ಕಡೆಗಳಲ್ಲಿ ಗಂಜಿ ಕೇಂದ್ರವನ್ನು ಪ್ರಾರಂಭಿಸಿದ್ದು, ನೆರೆ ಸಂತ್ರಸ್ಥರು ಅಲ್ಲಿ ಆಶ್ರಯ ಪಡೆಯಬೇಕೆಂದು ತಹಶೀಲ್ದಾರರವರು ತಿಳಿಸಿದ್ದಾರೆ. ಯಾವುದೇ ಅನಾಹುತ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ನದಿ ತೀರದ ತೋಟಪಟ್ಟಿ ಜನರ ಮನವೊಲಿಸಿ ಸುರಕ್ಷಿತ ಎತ್ತರದ ಸ್ಥಳಗಳಿಗೆ ತೆರಳುವಂತೆ ಗ್ರಾಮದ ಮುಖಂಡರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. 

ಬೆಳೆಗಳು ನದಿ ನೀರಿನಲ್ಲಿ ಜಲಾವೃತ್ತಗೊಂಡಿದ್ದು ಹೆಚ್ಚಿನ ಹಾನಿ ಒಗಾಗುವ ಭೀತಿಯಲ್ಲಿ ರೈತರು ಒಳಗಾಗಿದ್ದಾರೆ. ಬರಗಾಲದಲ್ಲಿ ಒಣಗಿ ನದಿ, ಇಂದು ಪ್ರವಾಹ ಉಂಟಾಗಿ ಉಕ್ಕಿ ಹರಿಯುತ್ತಿದೆ. ಈ ಬಾರಿ ಒಳ್ಳೆ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಪ್ರವಾಹದಿಂದ ಕೈಗೆ ಬಂದು ತುತ್ತು ಬಾಯಿ ಬಾರದಂತಾಗಿದೆ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. 

ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ನದಿ ತೀರದ ಕುಡಚಿ ಸೇತುವೆ, ರಾಯಬಾಗ-ಚಿಂಚಲಿ ಹಾಲಹಳ್ಳ ರಸ್ತೆ, ಬಾವನಸೌಂದತ್ತಿಯ ಮುಗದನಗದ್ದೆ ಸೇತುವೆ ರಸ್ತೆ, ಬಾವನಸೌಂದತ್ತಿ-ನಸಲಾಪೂರ ರಸ್ತೆ ಮತ್ತು ಅಂಕಲಿಯ ಸೀಮೆ ಲಕ್ಷೀದೇವಿ ಮಂದಿರ ಹತ್ತಿರದ ಅಂಕಲಿ-ಬಾವನಸೌಂದತ್ತಿ ಸೇತುವೆ ರಸ್ತೆಗಳು ಮುಳುಗಡೆ ಹೊಂದಿದ್ದು, ಬಾನವಸೌಂದತ್ತಿ ಗ್ರಾಮದ ಜನರು ಚಿಕ್ಕೋಡಿ, ಮಿರಜ ಕಡೆಗೆ ಹೋಗಲು ಪರದಾಡುವಂತಾಗಿದೆ. 

ದಿ.6ರಂದು ತಾಲೂಕಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆ ಇಡೀ ದಿನ ಮುಂದುವರೆದಿದ್ದು, ಪಟ್ಟಣದ ವಾರದ ಸಂತೆ ನಿರಸವಾಗಿತ್ತು. ಇಂದು ಸುರಿದ ಭಾರಿ ಮಳೆಯಿಂದ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಮಳೆಯಿಂದ 2-3 ಮನೆಗಳ ಗೋಡೆಗಳು ಕುಸಿದಿರುವ ಬಗ್ಗೆ ವರದಿಯಾಗಿದ್ದು, ಯಾವುದೇ ಪ್ರಾಣ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ. 

ದಿ.6ರಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ನೆರೆಗೆ ಸಿಲುಕಿದ ಸಂತ್ರಸ್ತರಿಗೆ ಎಲ್ಲ ರೀತಿಯಿಂದ ರಕ್ಷಣೆ ನೀಡಿ, ಪ್ರವಾಹವನ್ನು ಎದುರಿಸಲು ಸನ್ನದ್ದವಾಗಿರಲು ಅಧಿಕಾರಿಗಳಿಗೆ ಸೂಚಿಸಿದರು.