ಲೋಕದರ್ಶನ ವರದಿ
ಘಟಪ್ರಭಾ: ಜಿಲ್ಲೆಯಲ್ಲಿ ಉಂಟಾದ ಅತೀವೃಷ್ಟಿ ಸಮಯದಲ್ಲಿ 108 ಆರೋಗ್ಯ ಕವಚ ಜನರಿಗೆ ಸಹಕಾರಿಯಾಗಿದ್ದು ಇದರ ಕೃತಜ್ಞತಾ ಪೂರ್ವಕವಾಗಿ ಸರಕಾರಿ ಶಾಲೆವೊಂದು ತಮ್ಮ ಶಾಲೆಯ ಮುಖ್ಯ ಗೋಡೆಯ ಮೇಲೆ ಆರೋಗ್ಯ ಇಲಾಖೆಯ ಮಹತ್ವ ಕಾಂಕ್ಷಿ ಯೋಜನೆಯ ಆರೋಗ್ಯ ಕವಚ 108 ವಾಹನದ ಚಿತ್ರವನ್ನು ಚಿತ್ರಿಸಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಸಿದ್ಧಾರೂಢ ಮಠ ಸ.ಹಿ.ಪ್ರಾ ಶಾಲೆಯವರು ಈ ಜಾಗೃತಿ ಕಾರ್ಯವನ್ನು ಕೈಗೊಂಡಿದ್ದು, 108 ವಾಹನದ ಚಿತ್ರವನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಆದರೆ ಈ ಶಾಲೆಯು 15 ದಿನಗಳ ಹಿಂದೆ ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಪೂರ್ಣ ಮುಳುಗಿ ಹೋಗಿತ್ತು. ಶಾಲೆಯಲ್ಲಿನ ಆಟೋಪಕರಣ, ಪೀಠೋಪಕರಣಗಳು ಸಂಪೂರ್ಣವಾಗಿ ಹಾಳಾಗಿ ಶಾಲೆಯಲ್ಲಿ ಅಪಾರ ಪ್ರಮಾಣದಲ್ಲಿ ಕೆಸರು ತುಂಬಿಕೊಂಡಿತ್ತು. ಪ್ರವಾಹ ಇಳಿದ ನಂತರ ಶಾಲೆಯ ಸಹ ಶಿಕ್ಷಕ ಈರಣ್ಣಾ ಕಡಕೋಳ ಅವರು ತಮ್ಮ ಸಹ ಶಿಕ್ಷಕರ ಮತ್ತು ಗ್ರಾಮಸ್ಥರ ಸಹಾಯದಿಂದ 15 ದಿನಗಳ ಒಳಗಾಗಿ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಶಾಲೆಗೆ ಮರು ಜೀವ ನೀಡಿದ್ದಾರೆ ಎಂದು ಶಾಲೆಯ ಮುಖ್ಯೋಪಾದ್ಯಾಯ ಆಯ್.ಪಿ.ಸಜ್ಜನ ತಿಳಿಸಿದರು. ಶಾಲೆಯವರು ಸಕರ್ಾರಿ ಯೋಜನೆಯ ಜಾಗೃತಿ ಮೂಡಿಸುವ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸಾರ್ವಜನಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.