ಲೋಕದರ್ಶನ ವರದಿ
ಹರಪನಹಳ್ಳಿ 24: ಕರ್ನಾಟಕ ರಾಜ್ಯದಲ್ಲಿ ಕೋಮುವಾದಿಗಳನ್ನು ಅಧಿಕಾರ ರಾಜಕಾರಣದಿಂದ ದೂರವಿಡುವ ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್-ಜೆ.ಡಿ.ಎಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಕೆಡವಲಾಗಿದೆ. ನಮ್ಮದೇ ಪಕ್ಷಗಳ ಶಾಸಕರಿಂದ ಬಿ.ಜೆ.ಪಿ ಅಧಿಕಾರದ ಗದ್ದುಗೆ ಏರುವಂತಾಗಿರುವುದು ಪ್ರಜಾಪ್ರಭುತ್ವದ ದೌರ್ಬಾಗ್ಯ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡದೇ ಪಕ್ಷ ಸಂಘಟನೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮುಂದುವರೆಯಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿಯ ರಾಜ್ಯ ಕಾರ್ಯದರ್ಶಿ ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿಲ್ಲ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ, ಪಕ್ಷ ಸಂಘಟನೆಯತ್ತ ಗಮನ ಹರಿಸಿ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಬೇಕು. ಮಾಜಿ ಶಾಸಕರಾಗಿದ್ದ ದಿ.ಎಂ.ಪಿ.ರವೀಂದ್ರ ರವರು ಆರಂಭಿಸಿದ್ದ ಜನೋಪಯೋಗಿ ಕಾರ್ಯಗಳತ್ತ ಗಮನಹರಿಸಿ, ಅವರ ಅವಧಿಯಲ್ಲಿನ ಅಭೀವೃಧ್ಧಿ ಕಾರ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿದಷ್ಟೂ ಪಕ್ಷ ಗಟ್ಟಿಯಾಗುತ್ತದೆ ಎಂಬುದರಲ್ಲಿ ವಿಶ್ವಾಸವಿರಿಸಿಕೊಂಡಿರುವ ನಾನು, ಪಕ್ಷದ ಕಾರ್ಯಕರ್ತರ ಬೆಂಬಲಕ್ಕೆ ಸದಾಕಾಲ ಇರುತ್ತೇನೆ. ಹೀಗಾಗಿ ಯಾವುದೇ ಕಾರಣಕ್ಕೂ ದೃತಿಗೆಡದೇ ಪಕ್ಷವನ್ನು ಕಟ್ಟಿಬೆಳೆಸುವತ್ತ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಶ್ರಮ ವಹಿಸಬೇಕೆಂದು ಎಂ.ಪಿ.ಲತಾ ಮಲ್ಲಿಕಾರ್ಜುನ ಕರೆ ನೀಡಿದ್ದಾರೆ.