ಕೊಪ್ಪಳ 12: ಜಿಲ್ಲೆಯ ಅಗಳಕೇರಿ ವ್ಯಾಪ್ತಿಯಲ್ಲಿರುವ ಶ್ರೀ ಅಂದಿಗಾಲೀಶ ಗುಡ್ಡದಲ್ಲಿ ಅಷ್ಟಸಿದ್ಧಿ ಪ್ರದಾತನಾದ ಶ್ರೀ ಅಂದಿಗಾಲೀಶನ ಗುಡ್ಡದಲ್ಲಿ ಹನುಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ವಿಶ್ವಾವಸು ನಾಮ ಸಂವತ್ಸರದ ಚೈತ್ರ ಮಾಸದ, ಶುಕ್ಲ ಪಕ್ಷ ಹುಣ್ಣಿಮೆಯ ಈ ದಿನ ಶನಿವಾರ ಬಂದಿದ್ದರಿಂದ ಹನುಮ ಜಯಂತಿಗೆ ವಿಶೇಷತೆ ಬಂದಿದೆ. ಹನುಮಾನ ಜಯಂತಿ, ಹನುಮಾನ ಜನ್ಮೋತ್ಸವ, ಚೈತ್ರ ಪೂರ್ಣಿಮಾ ಎಂದು ಕರೆಯುವ ಈ ದಿನ ಹನುಮಂತ ದೇವರಿಗೆ ವಿಶಿಷ್ಟ ಕಳೆ ಮೂಡಿದೆ. ಚೈತ್ರ ನವಪದ ಒಲಿ ಮುಕ್ತಾಯದ ಈ ದಿನ ಪೂರ್ಣಿಮ ವ್ರತ ಆಚರಿಸುವುದರಿಂದ ಸದ್ಭಕ್ತರಿಗೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಂದು ಹನುಮ ಜಯಂತಿಗೆ ವಿಶೇಷತೆ ಇದೆ. ಆನೆಗೊಂದಿ, ಅಂಜನಾದ್ರಿ, ಪಂಪಾ ಸರೋವರದ ಪಶ್ವಿಮ ಭಾಗದಲ್ಲಿರುವ ಶಿವಪುರ ಗ್ರಾಮದ ಬಳಿಯ ಗುಡ್ಡದಲ್ಲಿ ಶ್ರೀ ಅಂದಿಗಾಲೀಶ ಸ್ವಾಮಿ ನೆಲೆ ನಿಂತಿದ್ದಾನೆ. ಸುಂದರಕಾಂಡದಲ್ಲಿ ಮಹೇಂದ್ರ ಪರ್ವತ ಸಮುಚ್ಚಯದ ಒಂದು ಭಾಗ ಎಂದು ಕರೆಯುವ ಈ ಗುಡ್ಡದಲ್ಲಿ ಭಜರಂಗಿಯ ಭಕ್ತರು ಇಂದು ಗುಡ್ಡ ಹತ್ತಿ ಅಂದಿಗಾಲೀಶನ ದರ್ಶನ ಪಡೆದರು.
ಬೆಳಿಗ್ಗೆಯಿಂದಲೇ ಗೋವಿಂದ ನಾಮ ಉದ್ಘೋಷಿಸುತ್ತ, ಹನುಮಂತನ ನಾಮಗಾನ ಪಾಡುತ್ತ, ವಿಶೇಷ ಪೂಜೆ ಸಲ್ಲಿಸಿದರು. ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಕುಂಕುಮಾರ್ಚನೆ, ಎಲೆ ಚೆಟ್ಟಿ ಸೇವೆ, ಹೂವಿನ ಅಲಂಕಾರ ಸೇವೆ, ಹಣ್ಣು ಕಾಯಿ ಸಲ್ಲಿಸಿ ಬಳಿಕ ಮಹಾ ಮಂಗಳಾರತಿ ಬೆಳಗಿದರು. ಶ್ರೀ ಅಂದಿಗಾಲೀಶ ದೇವರು ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವ ಎನ್ನುವ ಎಂಟು ಸಿದ್ಧಿಗಳನ್ನು ಹೊಂದಿದ್ದಾನೆ. ಅಸಾಧಾರಣ ಶಕ್ತಿಗಳನ್ನು ಪ್ರತಿನಿಧಿಸುತ್ತಿರುವ ಶ್ರೀ ಅಂದಿಗಾಲೀಶನ ಗುಡ್ಡಕ್ಕೆ ವರ್ಷದಿಂದ ವರ್ಷಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
ಇಂದು ನಡೆದ ಹನುಮ ಜಯಂತಿ ಆಚರಣೆಯ ಸೇವೆಯನ್ನು ಶ್ರೀ ಅಂದಿಗಾಲೀಶ ಸ್ವಾಮಿಯ ಭಕ್ತರಾದ ಕೃಷ್ಣ ಗಡಾದ, ಮಂಜುನಾಥ ಶೆಟ್ಟರ್, ವೆಂಕಟೇಶ ಪಟವಾರಿ, ಪರಶುರಾಮ ವಡ್ಡರ, ಪರಶುರಾಮ ಗಮಣಿ, ಬಸವರಾಜ ಕರ್ಕಿಹಳ್ಳಿ, ವೀರಣ್ಣ ಕೋಮಲಾಪುರ, ಕೆಂಚಪ್ಪ ಹಿಟ್ನಾಳ್, ಹನುಮಂತ ಬಿ., ಸೇರಿದಂತೆ ಅಗಳಕೇರಿ, ಶಹಪುರ, ಶಿವಪುರ ಮತ್ತು ಸುತ್ತಮುತ್ತಲ ಗ್ರಾಮದ ಭಕ್ತರು ಸಲ್ಲಿಸಿದರು.