ವಿಹಾರಿ, ರಹಾನೆ ಅರ್ಧ ಶತಕ: ಭಾರತ-ವಿಂಡೀಸ್(ಎ) ಪಂದ್ಯ ಡ್ರಾ

ಅಂಟಿಗುವಾ, ಆ 20               ಹನುಮ ವಿಹಾರಿ (64 ರನ್) ಹಾಗೂ ಅಜಿಂಕ್ಯಾ ರಹಾನೆ (54 ರನ್) ಅವರು ಅರ್ಧ ಶತಕಗಳೊಂದಿಗೆ ಲಯಕ್ಕೆ ಮರಳಿದ್ದು, ವೆಸ್ಟ್ ಇಡೀಸ್(ಎ) ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು.  

  ಸೋಮವಾರ ಇವರಿಬ್ಬರ ಅರ್ಧ ಶತಕಗಳ ಬಲದಿಂದ ಭಾರತ ಎರಡನೇ ಇನಿಂಗ್ಸ್ನಲ್ಲಿ ಐದು ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ, 305 ರನ್ ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್(ಎ) ಮೂರನೇ ಹಾಗೂ ಅಂತಿಮ ದಿನದ ಮುಕ್ತಾಯಕ್ಕೆ 21 ಓವರ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು 47 ರನ್ ಗಳಿಸಿತು.  

ಪ್ರವಾಸಿ ತಂಡದ ಪರ ಜಸ್ಪ್ರಿತ್ ಬುಮ್ರಾ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ವಿಂಡೀಸ್(ಎ)ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಿದರು.  

ಇದಕ್ಕೂ ಮುನ್ನ ಒಂದು ವಿಕೆಟ್ ಕಳೆದುಕೊಂಡು 84 ರನ್ ಗಳಿಂದ ರಹಾನೆ ಹಾಗೂ ವಿಹಾರಿ ದ್ವಿತೀಯ ಇನಿಂಗ್ಸ್ ಆರಂಭಿಸಿ 96 ರನ್ ಜತೆಯಾಟವಾಡಿದರು. ಬಳಿಕ ಅಕೀಮ್ ಫ್ರಜರ್ ಅವರು 48ನೇ ಓವರ್ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು.  

ಎಂಟು ಓವರ್ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ (19) ಅವರು ವಿಕೆಟ್ ಉರುಳಿತು. ಬಳಿಕ, ರವೀಂದ್ರ ಜಡೇಜಾ(9) ಅವರೂ ಔಟ್ ಆದರು.  

ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಅವರು ವಿಶ್ರಾಂತಿಗೆ ಮೊರೆ ಹೋಗಿದ್ದರು. ಹಾಗಾಗಿ, ಅಂಜಿಕ್ಯಾ ರಹಾನೆ ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದ್ದರು. 64 ರನ್ ಗಳಿಸಿ ಆಡುತಿದ್ದ ರಹಾನೆ ಅವನ್ನು ಅಕೀಮ್ ಫ್ರಜರ್ ಔಟ್ ಮಾಡಿ ಎರಡನೇ ವಿಕೆಟ್ ಕಿಸೆಗೆ ಹಾಕಿಕೊಂಡರು.  

ವೃದ್ದಿಮಾನ್ ಸಹಾ(14) ಹಾಗೂ ಆರ್.ಅಶ್ವಿನ್(10) ಅವರು ಅಜೇಯರಾಗಿ ಉಳಿದರು. ಐದು ವಿಕೆಟ್ಗೆ 188 ರನ್ ಗಳಿಸಿ ಭಾರತ ಡಿಕ್ಲೇರ್ ಮಾಡಿಕೊಂಡಿತು.  

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಭಿಯಾನವನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿ ಮೂಲಕ ಆರಂಭಿಸಲಿವೆ. ಮೊದಲನೇ ಹಣಾಹಣಿ ಗುರುವಾರ ಆರಂಭವಾಗಲಿದೆ.  

ಸಂಕ್ಷಿಪ್ತ ಸ್ಕೋರ್ 

ಭಾರತ: ಪ್ರಥಮ ಇನಿಂಗ್ಸ್:297/5 (ಡಿ), ದ್ವಿತೀಯ ಇನಿಂಗ್ಸ್: 188/5 (ಹನುಮ ವಿಹಾರಿ 64, ಅಜಿಂಕ್ಯಾ ರಹಾನೆ 54;, ಅಕೀಮ್ ಫ್ರಜರ್ 2/43); ವೆಸ್ಟ್ಇಂಡೀಸ್(ಎ): ಪ್ರಥಮ ಇನಿಂಗ್ಸ್: 181 ಹಾಗೂ 47/3 (ಕೆರೆಮಿ ಸೊಲೊಜನೊ 16, ಬ್ರೆಂಡನ್ ಕಿಂಗ್ 14; ರವೀಂದ್ರ ಜಡೇಜಾ 1/3)