ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 05: ಬರುವ ಹಂಪಿ ಉತ್ಸವದಲ್ಲಿ ಜಾನಪದ ಕಲಾವಿದರಿಗೆ ಪ್ರಮುಖ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜತೆ ಸಮಾನ ಗೌರವ, ಸಂಭಾವನೆ ನೀಡಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಒತ್ತಾಯಿಸಿದರು.
ಕನ್ನಡ ಜಾನಪದ ಪರಿಷತ್ ಹಗರಿಬೊಮ್ಮನಹಳ್ಳಿ ತಾಲೂಕು ಘಟಕ ಸಮೀಪದ ಹಂಪಾಪಟ್ಟಣ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಜಾನಪದ ಪ್ರಾಕಾರಗಳ ರೇಖಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಷ್ಟ ಪ್ರದರ್ಶಕರಿಗೆ ನೀಡುವ ಸಂಭಾವನೆ, ವಸತಿ, ಊಟೋಪಾಚಾರವನ್ನು ಜಾನಪದ ಕಲಾವಿದರಿಗೆ ಒದಗಿಸಬೇಕು. ಬೆಂಗಳೂರು ಮೂಲದ ಭರತನಾಟ್ಯ, ಕೂಚುಪುಡಿ, ಗಾಯಕ ಗಾಯಕಿಯರಿಗೆ ದೊರೆಯುವ ಸೌಕರ್ಯಗಳು ಜಾನಪದ ಕಲಾವಿದರಿಗೆ ದೊರೆಯುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಾನಪದ ಕಲಾವಿದರಿಗೆ, ಕಲಾ ಪ್ರದರ್ಶಕರಿಗೆ ತಾರತಮ್ಯ ಮಾಡಿದರೆ ಕಜಾಪ ಸಹಿಸುವುದಿಲ್ಲ. ಸಮಾನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಂಜುನಾಥ ಎಚ್ಚರಿಸಿದರು.
ಕಲಾ ಅಧ್ಯಾಪಕ ಆನಂದ ಕಡ್ಲಿ ಅವರ ನಾಡಿನ ಜಾನಪದ ಸಂಸ್ಕೃತಿ, ಪರಂಪರೆ ಸಾರುವ 80 ರೇಖಾಚಿತ್ರಗಳ ಪ್ರದರ್ಶನ, ಹಂಪಾಪಟ್ಟಣ ಗ್ರಾಮದ ಗೊಂದಲಿಗರ ರಾಮಣ್ಣ ಮತ್ತು ತಂಡ ಪ್ರಸ್ತುತ ಪಡಿಸಿದ ಗೊಂದಲಿಗರ ಹಾಡು, ಗ್ರಾಮದ ಜಾನಪದ ಮಹಿಳಾ ಸಂಘದ ಕಳಿಂಗರಾಯನ ಪದಗಳು, ಚಲವಾದಿ ಹೇಮಣ್ಣನ ಕಳಳೆವಾದನ, ಹಿರಿಯ ರಂಗ ಕಲಾವಿದ ಗೆದ್ದಲಗಟ್ಟಿ ತಿಮ್ಮಣ್ಣ ಮತ್ತು ನೀರಗಂಟೆ ಕೃಷ್ಣಮೂರ್ತಿ ತಂಡದ ಭಜನೆ ಪದಗಳು ನೆರೆದಿದ್ದ ಜನಪದ ಪ್ರಿಯರ ಮನಗೆದ್ದವು.
ಕಜಾಪ ತಾಲೂಕು ಘಟಕದ ಅಧ್ಯಕ್ಷ ಎ.ಕೇಶವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಿಪ್ರಾ ಶಾಲೆಯ ಮುಖ್ಯಗುರು ಕೆ. ಛತ್ರಪತಿ, ಸಿಆರ್ಪಿ ನಾರಾಯಣನಾಯ್ಕ, ಎ.ಕುಬೇರಪ್ಪ, ಕಜಾಪ ಕಾರ್ಯದರ್ಶಿ ಜಾಗಟಗೆರೆ ಹಾಲೇಶ್, ನವೋದಯ ಯುವಕ ಸಂಘದ ಅಧ್ಯಕ್ಷ ಕಂಬಾರ ಪ್ರಭುಕುಮಾರ್, ಸೆರೆಗಾರ ಮಂಜುನಾಥ್, ಮಹಮ್ಮದ್ ರಫಿ ಮತ್ತಿತರರು ಉಪಸ್ಥಿತರಿದ್ದರು