ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವ ಗೃಹಲಕ್ಷ್ಮಿ ಯೋಜನೆ

Grihakshmi Yojana has made women self-reliant in Uttara Kannada district

ಕಾರವಾರ 04:ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳೂ ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಪರಾವಲಂಬಿಗಳಿಂದ ಸ್ವಾವಲಂಬಿಗಳಾಗಿ ಬದಲಾಗಿದ್ದು, ಗೃಹಲಕ್ಷ್ಮಿಯ ಮೊತ್ತದಿಂದ ಸ್ವಂತ ಆದಾಯದ ಮೂಲಗಳನ್ನು ಕಂಡುಕೊಂಡಿದ್ದಾರೆ. 

ಗೃಹಲಕ್ಷ್ಮಿ ಬರುವ ಮೊದಲು ಆರ್ಥಿಕವಾಗಿ ಪತಿ ಅಥವಾ ಮಗನನ್ನು ಅವಲಂಬಿಸಿದ್ದ ಮಹಿಳೆಯರು ಈಗ ಆರ್ಥಿಕವಾಗಿ ಸ್ವಯಂ ಸಬಲರಾಗುತ್ತಿದ್ದಾರೆ. ಹಣವನ್ನು ಕೂಡಿಡುವ ಬದಲು ಅದನ್ನು ಬಂಡವಾಳವನ್ನಾಗಿ ಮಾಡಿಕೊಂಡು ನಿರಂತರ ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಜಾಣೆಯರಾಗಿದ್ದಾರೆ. ಯೋಜನೆಯಿಂದಾಗಿ ತನ್ನ ಸಣ್ಣ ಪುಟ್ಟ ಆಸೆಗಳು ಸೇರಿದಂತೆ ಕುಟುಂಬದ ಮತ್ತು ಮಕ್ಕಳ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿದ್ದು, ಬ್ಯಾಂಕ್ ವ್ಯವಹಾರಗಳ ಬಗ್ಗೆಯು ತಿಳಿದುಕೊಳ್ಳಲು ಸಾಧ್ಯವಾಗಿದೆ.  

ಹೊನ್ನಾವರ ತಾಲೂಕು ಮಂಕಿ ಗ್ರಾಮದ ಮಾಲತಿ ಮೋಹನ ನಾಯ್ಕ ಅವರು ಗೃಹಲಕ್ಷ್ಮಿ ಯೋಜನೆಯ ಮೊತ್ತದಿಂದ ಹಣ್ಣಿನ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದು, ಅವರಿಗೆ ಯೋಜನೆಯು ಪತಿಯ ನಿಧನದ ನಂತರವೂ ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸಹಕಾರಿಯಾಗಿದ್ದರೆ, ಕುದ್ರಿಗಿ ಗ್ರಾಮದ ಪಾರ್ವತಿ ಮಾದೇವ ನಾಯ್ಕ ಹಾಗೂ ಹಳದೀಪುರ ಗ್ರಾಮದ ವೀಣಾ ವೆಂಕಟೇಶ ಆಚಾರಿ ಮತ್ತು ಖರ್ವಾ ಗ್ರಾಮದ ಲಕ್ಷ್ಮೀ ನರಸಿಂಹ ಶೆಟ್ಟಿ ಅವರು ಚಿಕ್ಕದಾದ ಅಂಗಡಿ ಮಾಡಿ ಸ್ವಂತ ಆದಾಯ ಗಳಿಸುತ್ತಿದ್ದಾರೆ. ಕಡ್ಲೆ ಪಂಚಾಯತ್ ವಂದೂರ ಗ್ರಾಮದ ಮಹಾದೇವಿ ಲಕ್ಷ್ಮಣ ಪಟಗಾರ ಅವರು 2 ಹಸುಗಳನ್ನು ಖರೀದಿಸಿ ಹಾಲು ವ್ಯಾಪಾರದ ಮೂಲಕ ಆದಾಯ ಗಳಿಸುತ್ತಿದ್ದರೆ, ಕಾಸರಕೋಡ ಗ್ರಾಮದ ಸುಧಾ ನಾಯ್ಕ ಅವರು ಗೃಹಲಕ್ಷ್ಮಿ ಹಣದಿಂದ ಹಿಟ್ಟಿನ ಗಿರಣಿ ಖರೀದಿಸಿದ್ದು, ಬಳಕೂರು ಗ್ರಾಮದ ಕಲಾವತಿ ವೆಂಕಟ್ರಮಣ ನಾಯ್ಕ ಅವರು ಹೊಲಿಗೆ ಯಂತ್ರವನ್ನು ತೆಗೆದುಕೊಂಡು ಬಟ್ಟೆ ಹೊಲೆದು ಅದರಿಂದ ಬರುವ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ.. 

ಅಂಕೋಲಾ ತಾಲೂಕಿನ ತೆನಬೋಳೆ ಗ್ರಾಮದ ವಿದ್ಯಾ ಸಂತೋಷ ಗುನಗಾ ಅವರು ಗೃಹಲಕ್ಷ್ಮಿ ಯೋಜನೆಯ 13 ಕಂತುಗಳ ಹಣದಲ್ಲಿ ಹೊಲಿಗೆ ಯಂತ್ರವನ್ನು ಖರೀದಿಸಿ ಬಟ್ಟೆ ಹೊಲೆಯುತ್ತಿದ್ದು, ಬಟ್ಟೆ ಹೊಲೆದ ಹಣದಿಂದ ಮನೆಗೆ ಅಗತ್ಯವಿರುವ ಸಾಮಾನುಗಳನ್ನು ಖರೀದಿಸುತ್ತಿದ್ದು, ಇತ್ತಿಚೆಗೆ ತಮ್ಮ ಕುಟುಂಬದ ಬಹುದಿನಗಳ ಆಸೆಯಾದ ಪ್ರೀಡ್ಜ್‌ ಖರೀದಿಸಿದ್ದು, ಅದರ ಹಣದ ಕಂತನ್ನು ಬಟ್ಟೆ ಹೊಲೆಯುವುದರಿಂದ ಬರುವ ಆದಾಯದಲ್ಲಿ ಪಾವತಿಸುತ್ತಿದ್ದಾರೆ. ಹಾರವಾಡದ ಯುವನ ಮೋಹನ ಕುವಾಳೇಕರ ಅವರ ಗ್ಯಾಸ್ ಸ್ಟವ್ ಖರೀದಿಸಿದ್ದು ಮಾತ್ರವಲ್ಲದೇ ಮಳೆಗಾಲಕ್ಕೆ ತೊಂದರೆಯಾಗದಂತೆ ಮನೆಯ ಮುಂದೆ ಶೀಟ್ ಹಾಕಿಸಿಕೊಂಡಿದ್ದಾರೆ. 

ಮುಂಡಗೋಡು ತಾಲೂಕಿನ ಹರಗನಳ್ಳಿ ಗ್ರಾಮದ ಹಸೀನಾಬಿ ಗೌಸ್ ಮುದ್ದೇನಿಲಿಗಾರ ಅವರು ಗೃಹಲಕ್ಷ್ಮಿ ಹಣದಿಂದ ಬಳೇ ವ್ಯಾಪಾರ, ಸ್ಟೇಷನರಿ ಮತ್ತು ಮಕ್ಕಳ ಅಟಿಕೆ ಸಾಮಾನುಗಳನ್ನು ಖರೀದಿಸಿ ಅವುಗಳನ್ನು ಸಂತೆಯಲ್ಲಿ ಮಾರಿ ಆದಾಯ ಗಳಿಸುತ್ತಿದ್ದು, ಇದೇ ಆದಾಯದಲ್ಲಿ  ಸೊಸೆಗೆ ಹೊಲಿಗೆಯಂತ್ರವನ್ನೂ ಸಹ ಕೊಡಿಸಿದ್ದು, ಪತಿಯ ನಿಧನದ ನಂತರ ತಲೆದೋರಿದ್ದ ಆರ್ಥಿಕ ಸಂಕಷ್ಠದಿಂದ ಹೊರಬಂದು ನೆಮ್ಮದಿಯ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಮುಂಡಗೋಡ ಪಟ್ಟಣದ ಸಾಹೇರಾಬಾನು ವಾಷಿಂಗ್ ಮೆಷಿನ್ ಖರೀದಿಸಿದ್ದರೆ ಹುನಗುಂದಾ ಯಲ್ಲವ್ವಾ ಹುಗ್ಗಿ ತಮ್ಮ ಪ್ಯಾರಾಲೀಸಿಸ್ ಚಿಕಿತ್ಸೆಗೆ ಈ ಮೊತ್ತ ನೆರವಾಗುತಿದ್ದು ಚಿಕಿತ್ಸೆಯ ಹಣಕ್ಕಾಗಿ ಯಾರ ಬಳಿಯೂ ಕೈ ಚಾಚದೇ ಇರುವುದು ನೋವಿನ ನಡುವೆಯೂ ನೆಮ್ಮದಿ ನೀಡಿದೆ ಎನ್ನುತ್ತಾರೆ.. 

ಸಿದ್ದಾಪುರ ತಾಲೂಕಿನ ಸುಮನಾ ಸುರೇಶ್ ಗೌಡ ಕೊಡ್ತಗಣಿ ಅವರು ಜೆರ್ಸಿ ಆಕಳು ಮತ್ತು ಎಮ್ಮೆ ಖರೀದಿಸಿ ಪ್ರತೀ ತಿಂಗಳು 250 ಲೀಟರ್ ಹಾಲು ಮಾರಿ ಆರ್ಥಿಕ ಲಾಭ ಪಡೆಯುತ್ತಿದ್ದಾರೆ. ಹನುಮವ್ವ ಅವರು ಗೃಹಲಕ್ಷ್ಮಿ ಹಣದಿಂದ ಒಳಕಲ್ಲು, ಬನೆಕಲ್ಲು, ಕುಠಾಣಿಯ ವ್ಯಾಪಾರ ಮಾಡುತ್ತಾ ಆರ್ಥಿಕ ಸುಧಾರಣೆ ಕಂಡುಕೊಂಡಿದ್ದಾರೆ. 

ಯಾವುದೇ ಕೊರತೆಗಳಿದ್ದರೂ ಅವುಗಳನ್ನು ಸರಿದೂಗಿಸಿಕೊಂಡು ತಮ್ಮ ಕುಟುಂಬದ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವ ಮಹಿಳೆಯರು, ಸರ್ಕಾರವು ಪ್ರಸ್ತುತ ತಮಗಾಗಿ ನೀಡುತ್ತಿರುವ ಗೃಹಲಕ್ಷಿಯ ಮೊತ್ತವನ್ನು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಕುಟುಂಬದ ಶ್ರೇಯೋಭಿವೃಧ್ದಿಗಾಗಿ ಬಳಸುತ್ತಿದ್ದಾರೆ. ಈ ಮೊತ್ತವನ್ನು ಯಾವುದೇ ಅನಗತ್ಯವಾದ ಅನುತ್ಪಾದಕ ವೆಚ್ಚಗಳಿಗೆ ಖರ್ಚು ಮಾಡದೇ, ಬಹುತೇಕ ಮಹಿಳೆಯರು ಅದನ್ನು ಧೀರ್ಘಾವಧಿಯ ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಬುದ್ದಿವಂತಿಕೆಯನ್ನು ಮೆರೆದು, ಇತರರಿಗೆ ಮಾದರಿಯಾಗುವ ಮೂಲಕ ಸರ್ಕಾರದ ಈ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 3,20,780 ಮಹಿಳೆಯನ್ನು ನೋಂದಣಿ ಮಾಡಿದ್ದು, ಅವರಿಗೆ ಇದುವರೆಗೆ ಒಟ್ಟು 845.39 ಕೋಟಿ ರೂ ಗಳ ನೆರವು ನೀಡಲಾಗಿದೆ. ತಾಂತ್ರಿಕ ಕಾರಣಗಳು ಸೇರಿದಂತೆ ಮತ್ತಿತರ ಕಾರಣಗಳಿಂದ ಯೋಜನೆಯ ವ್ಯಾಪ್ತಿಗೆ ಒಳಪಡದ ಅರ್ಹ ಮಹಿಳೆಯನ್ನು ಗುರುತಿಸಿ ಅವರಿಗೆ ಯೋಜನೆಯ ಸೌಲಭ್ಯ ದೊರೆಯುವಂತೆ ಮಾಡುವ ಮೂಲಕ ಜಿಲ್ಲೆಯ ಎಲ್ಲಾ ಮಹಿಳೆಯರಿಗೆ ಯೋಜನೆಯ ಪ್ರಯೋಜನವನ್ನು ಒದಗಿಸಲಾಗುವುದು : ವಿರೂಪಾಕ್ಷ ಗೌಡ ಪಾಟೀಲ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ.