ಬೆಂಗಳೂರು,
ಏ.19, ದುಬೈ ಸೇರಿದಂತೆ ಯುಎಇ ಸಂಯುಕ್ತ ಸಂಸ್ಥಾನಗಳಿಗೆ ಉದ್ಯೋಗಕ್ಕೆ
ತೆರಳಿರುವ ಕನ್ನಡಿಗರು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವುದು
ಸರ್ಕಾರದ ಗಮನಕ್ಕೆ ಬಂದಿದ್ದು, ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ
ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಈ
ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ದುಬೈನಲ್ಲಿ ಅನೇಕ ಕಾರ್ಮಿಕರು ಆಹಾರ ಮತ್ತು
ವೈದ್ಯಕೀಯ ಸೇವೆ ನಿರೀಕ್ಷೆಯಲ್ಲಿರುವುದು ಗಮನಕ್ಕೆ ಬಂದಿದ್ದು, ದುಬೈನಲ್ಲಿರುವ ಕನ್ನಡ
ಸಂಘಟನೆಯ ಪ್ರವೀಣ್ ಕುಮಾರ್ ಶೆಟ್ಟಿ, ಬಸವ ಸಮಿತಿಯ ಚಂದ್ರಶೇಖರ್ ಲಿಂಗದಹಳ್ಳಿಯವರು
ಕಾರ್ಮಿಕರಿಗೆ ಆಹಾರ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ.
ಸರ್ಕಾರ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.ರಾಜ್ಯ
ಸರ್ಕಾರ ಕೊರೊನಾ ಲಾಕ್ ಡೌನ್ ಅವಧಿ ಮುಗಿದ ತಕ್ಷಣ ದುಬೈನಲ್ಲಿ ತೊಂದರೆಗೆ ಸಿಲುಕಿರುವ
ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ
ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು
ಅಸಹಾಯಕ ಕಾರ್ಮಿಕರಿಗೆ ಆಹಾರ ಹಾಗೂ ಇತರ ಅಗತ್ಯ ಸೇವೆಗಳನ್ನು ಒದಗಿಸಲು
ವಿನಂತಿಸಿಕೊಳ್ಳುತ್ತೇನೆ. ರಾಜ್ಯ ಸರ್ಕಾರ ಯಾವಾಗಲೂ ನಿಮ್ಮ ಕಾಯಲು ಬದ್ಧವಾಗಿದೆ ಎಂದು
ಹೇಳಿದ್ದಾರೆ.