ಗೂಡ್ಸ್‌ ರೈಲ್ವೆ ಬೈಪಾಸ್‌: ರದ್ದತಿಗೆ ಸಚಿವ ಸೋಮಣ್ಣ ಸೂಚನೆ

ಬಳ್ಳಾರಿ 06: ನಗರದ ಹೊರ ವಲಯದಲ್ಲಿ ಖಾಸಗಿ ಕಂಪನಿಯೊಂದು ನಿರ್ಮಿಸಲು ಉದ್ಧೇಶಿಸಿದ್ದ ಖಾಸಗಿ ಗೂಡ್ಸ್‌ ರೈಲು ಬೈಪಾಸ್ ಟ್ರ್ಯಕ್ ಯೋಜನೆಯನ್ನು ರದ್ದುಗೊಳಿಸುವಂತೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಇಲಾಖೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಭಾನುವಾರ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆ ವೇಳೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಲೋಕಸಭಾ ಸದಸ್ಯ ಈ.ತುಕಾರಾಂ ಅವರು ಖಾಸಗಿ ಗೂಡ್ಸ್‌ ರೈಲ್ವೆ ಬೈಪಾಸ್ ಟ್ರ್ಯಕ್ ಕುರಿತು ಸಚಿವರ ಗಮನಕ್ಕೆ ತಂದರು.  

ಸದರಿ ಬೈಪಾಸ್ ಟ್ರ್ಯಕ್ ನಿರ್ಮಿಸಲು ಫಲವತ್ತಾದ ಜಮೀನಿನ ಭೂ ಸ್ವಾಧೀನಕ್ಕೆ ಮುಂದಾಗಿದ್ದು, ಈ ಭಾಗದ ರೈತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿ, ಶಾಸಕರು-ಸಂಸದರಿಗೆ ಮನವಿ ಮಾಡಿದ್ದರು. ರೈತರ ಸಮಸ್ಯೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸಂಸದ ಈ.ತುಕಾರಾಂ ಅವರ ಒತ್ತಾಯದ ಮೇರೆಗೆ ಯಾವುದೇ ಕಾರಣಕ್ಕೂ ಖಾಸಗಿ ರೈಲ್ವೆ ಟ್ರ್ಯಕ್ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.