ಚಿಕ್ಕೋಡಿ, ನ 4: ಇಡೀ ರಾಜ್ಯದಲ್ಲಿಯೇ ವಸತಿ ಯೋಜನೆಗಳಲ್ಲಿ ಗೋಲ್ಮಾಲ್ ಆಗಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಆರೋಪಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ, ವಿವಿಧ ವಸತಿ ಯೋಜನೆಗಳ ಹಣ ಬಿಡುಗಡೆ ಸ್ಥಗಿತ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ವಸತಿ ಯೋಜನೆಯಲ್ಲಿ ಏಳು ವರ್ಷಗಳಲ್ಲಿ ಸಾಕಷ್ಟು ಗೋಲ್ ಮಾಲ್ ಆಗಿದೆ. ಬಡವರ ಮನೆಗಳನ್ನು ಬಹುತೇಕ ಜನ ಲಪಟಾಯಿಸಿದ್ದು, ನಿನ್ನೆಯಷ್ಟೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಿದ್ದೇನೆ ಎಂದರು.
ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಪತ್ರ ಬರೆದಿದ್ದೇನೆ. ಒಂದು ಮನೆಗೆ 10 ರಿಂದ 15 ಬಾರಿ ಹಣ ಪಡೆದಿರುವದು ಬೆಳಕಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಒಂದು ವಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ಜಿಲ್ಲಾ ಮಟ್ಟ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.
ಈ ಬಗ್ಗೆ ಎಷ್ಟೇ ದೊಡ್ಡ ಅಧಿಕಾರಿಗಳಿದ್ದರು. 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ವಸತಿ ಯೋಜನೆಯಲ್ಲಿ ಗೋಲ್ಮಾಲ್ ಆಗಿರುವುದರಿಂದ ಹಣ ಬಿಡುಗಡೆಗೆ ಸ್ಥಗಿತಗೊಳಿಸಲಾಗಿದೆ ಎಂದರು.