ಮಕ್ಕಳ ಕೈಯಲ್ಲಿ ಪೆನ್ನು, ಪುಸ್ತಕಗಳನ್ನು ಕೊಟ್ಟು ಶಾಲೆಗೆ ಕಳಿಸಿ: ನೀಲನಾಯಕ

ದಲಿತ ಸಂಘರ್ಷ ಸಮಿತಿ ಭೀಮವಾದ ಸಂಸ್ಥಾಪಕ ಪರುಶರಾಮ ನೀಲನಾಯಕ ಮಾತನಾಡಿದರು,

ಜಮಖಂಡಿ 27: ತೆಂಗು, ಊದಬತ್ತಿ, ಹೂ, ಹಣ್ಣುಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ದೇವಸ್ಥಾನಕ್ಕೆ ಕಳಿಸಬೇಡಿ. ಮಕ್ಕಳ ಕೈಯಲ್ಲಿ ಪೆನ್ನು, ಪುಸ್ತಕಗಳನ್ನು ಕೊಟ್ಟು ಶಾಲೆಗೆ ಕಳಿಸಿದ್ದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ಸಂಸ್ಥಾಪಕ ಪರುಶರಾಮ ನೀಲನಾಯಕ ಹೇಳಿದರು. 

ನಗರದ ಚಂದ್ರಗೀರಿ ಪೇಠದ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಆಯ್ಕೆ ಸಮಿತಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯ ಮೌಡ್ಯತೆಗೆ ಹೊಂದಿಕೊಂಡಿದ್ದಾರೆ. ಮೊದಲು ಮೌಡ್ಯತೆಗಳಿಂದ ಹೊರಗೆ ಬಂದು ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ದಲಿತರು ಕೇವಲ ಚಳುವಳಿಗೆ ಅಷ್ಟೇ ಮೀಸಲು ಆಗಬಾರದು. ಹೆತ್ತ ತಂದೆ, ತಾಯಿಯವರಿಗೆ ಮೊದಲು ನಮಸ್ಕರಿಸಬೇಕು. ಮತ್ತೊಬ್ಬರಿಗೆ ನಮಸ್ಕರಿಸುವದನ್ನು ಬಿಟ್ಟು ತಮ್ಮ ಸ್ವಂತ ಪ್ರಯತ್ನದಿಂದ ಮುಂದೆ ಬರಬೇಕು ಎಂದರು. 

ಭೀಮವಾದ ಸಂಘಟನೆಯು ಅನ್ಯಾಯದ ವಿರುದ್ಧ ಮಾತ್ರ ಇರುತ್ತದೆ. ಬರುವ ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಬೇಕೆಂದು ಸಂಘಟನೆಯು ನಿರ್ಧಾರ ಮಾಡಿದೆ. ದಲಿತರಿಗೆ ಸೌಲಭ್ಯಗಳು ಹಾಗೂ ಮೀಸಲಾತಿ ಜಾರಿಯಾಗದೆ ಇರುವ ಬಗ್ಗೆ. ಕೆಲವಂದಿಷ್ಟು ಗ್ರಾಮಗಳಲ್ಲಿ ದಲಿತ ಸಮಾಜದ ಯುವಕರಿಗೆ ಕಟಿಂಗ್ ಮಾಡುವದಿಲ್ಲ. ಹಾಗೂ ದಲಿತ ಕುಟುಂಬಕ್ಕೆ 2ಎಕ್ಕರೆ ಭೂಮಿಯನ್ನು ನೀಡಬೇಕು.  ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿಕೊಂಡ ಕುಟುಂಬಸ್ಥರ ಮಕ್ಕಳಿಗೆ ಸರಕಾರಿ ಕೆಲಸ ನೀಡಬೇಕು. ಸ್ವಯಂ ಉದ್ಯೋಗ ಕಲ್ಪಿಸಬೇಕೆಂದು ಹೀಗೆ ಹಲವಾರು ಬೇಡಿಕೆಗಳು ಈಡೇರಿಸುವ ಗೋಸ್ಕರ ಮುತ್ತಿಗೆ ಹಾಕಲು ಸಂಘಟನೆ ನಿರ್ಧಾರ ಮಾಡಿದೆ ಎಂದರು. 

ಸಂವಿಧಾನದ ಬದಲಾವಣೆ ಮಾಡುತ್ತವೆ ಎಂದು ಹೇಳುತ್ತಾರೆ. ಅದು ಸಾಧ್ಯವಿಲ್ಲ. ಚುನಾವಣೆ ಸಮಯದಲ್ಲಿ  ಮತದಾನದಲ್ಲಿ ಸಹ ಮೋಸ ನಡೆದಿದೆ. ಅದನ್ನು ತಡೆಯುವ ಕೆಲಸ ಮಾಡಬೇಕು. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳು ಎರಡು ಮುಖದ ಒಂದು ನಾಣ್ಯಗಳು ಇದ್ದ ಹಾಗೆ ಅವರ ಮಾತಿಗೆ ಮರಳು ಆಗಬೇಡಿ. ದಲಿತರು ದುರ್ಗಾದೇವಿ ಜಾತ್ರೆ, ಕೇತ್ರೇಗಳನ್ನು ಮೊದಲು ಬಿಟ್ಟು. ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದರು. 

ಇದೇ ಸಂದರ್ಭದಲ್ಲಿ ಜಿಲ್ಲಾ, ತಾಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಯಾದ ಸಿದ್ದು ಮಾದರ, ಪಡಿಯಪ್ಪ ಕಳ್ಳಿಮನಿ, ಸುರೇಶ ನಡುವಿನಮನಿ, ಸತೀಶ ಗಾಡಿ, ಪ್ರಕಾಶ ಮಾಂಗ, ತುಳಜಪ್ಪ ನೀಲನಾಯಕ,ಶಿಡ್ಲಪ್ಪ ಮಾದರ, ಗಾಯಿತ್ರಿ ಪೂಜಾರಿ, ಶಶಿಕಾಂತ ತೇರದಾಳ, ದೀಲೀಪ ದಾಶ್ಯಾಳ ಸೇರಿದಂತೆ ಅನೇಕ ದಲಿತ ಮುಖಂಡರು ವೇದಿಕೆಯಲ್ಲಿ ಇದ್ದರು.