ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕೌಶಲ್ಯಗಳು ಕವಚದಂತೆ: ಕುಲಸಚಿವ ಸಂತೋಷ ಕಾಮಗೌಡ

ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕೌಶಲ್ಯಗಳು ಕವಚದಂತೆ: ಕುಲಸಚಿವ ಸಂತೋಷ ಕಾಮಗೌಡ  Self-defense skills are like armor for female students: Registrar Santosh Kamagowda


ಬೆಳಗಾವಿ, 09 : ವಿದ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಗೆ ಸಂಬಂಧಿಸಿದ ವಿವಿಧ ಕೌಶಲ್ಯಗಳನ್ನು ಪಡೆದುಕೊಂಡಿರಬೇಕು. ಅವರು ಪಡೆದ ಈ ಜ್ಞಾನ ಅವರನ್ನು ಕವಚದಂತೆ ರಕ್ಷಿಸುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಅವರು ಅಭಿಪ್ರಾಯಪಟ್ಟರು. ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶ ಮತ್ತು ದೈಹಿಕ ಶಿಕ್ಷಣ ವಿಭಾಗ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಮತ್ತು ಯಕ್ಷಿತ್ ಯುವ ಫೌಂಡೇಶನ್ ಬೆಳಗಾವಿ ಇವರ ಸಹಯೋಗದಲ್ಲಿ  ಸೋಮವಾರ ಕಾಲೇಜಿನ ಸಭಾಂಗಣದಲ್ಲಿ  ಪಿ . ಎಂ. ಉಷಾ ಮೇರು ಅಡಿಯಲ್ಲಿ ಹಮ್ಮಿಕೊಂಡಿದ್ದ "ವಿದ್ಯಾರ್ಥಿನಿಯರಿಗೆ ಒಂದು ವಾರದ ಆತ್ಮರಕ್ಷಣಾ ತರಬೇತಿ" ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

   ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿಯ ಅಗತ್ಯತೆಯಿದೆ. ವಿವಿಧ ರಕ್ಷಣಾ ಮತ್ತು ಸುರಕ್ಷತಾ ತಂತ್ರಗಳನ್ನು ಕಲಿಯುವುದರಿಂದ ತುರ್ತು ಸಂದರ್ಭಗಳಲ್ಲಿ  ಪರಿಣಾಮಕಾರಿಯಾಗಿ  ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಜಾಗೃತಿ ಮತ್ತು ತಮ್ಮನ್ನು ತಾವು ಆಪತ್ಕಾಲದಲ್ಲಿ ರಕ್ಷಿಸಿಕೊಳ್ಳುವ ಪರಿಯನ್ನು  ಶಿಕ್ಷಣ ಸಂಸ್ಥೆಗಳು, ಸಮಾಜದ ಸಂಘ, ಸಂಸ್ಥೆಗಳು ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಈ ಆತ್ಮರಕ್ಷಣಾ ತರಬೇತಿಯು ಒಂದು ಪ್ರಮುಖ ಹೆಜ್ಜೆಯಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಧೈರ್ಯ ಮತ್ತು ಸ್ವಾವಲಂಬನೆಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. 

ವಿದ್ಯಾರ್ಥಿನಿಯರು ಯಾವುದೇ ಸಂದರ್ಭದಲ್ಲಿ ಭಯ ಪಡದೇ ಸಮಾಜದಲ್ಲಿ ಧೈರ್ಯದಿಂದ ಇರಬೇಕೆಂದು. ತಮ್ಮ ಜೊತೆಯಲ್ಲಿ ಯಾರಾದರೂ ಅನುಚಿತವಾಗಿ ವರ್ತಿಸಿದಲ್ಲಿ ಅವರನ್ನು ಗಟ್ಟಿಯಾದ ಧ್ವನಿಯಿಂದ ಪ್ರತಿಭಟಿಸಬೇಕು. ಇಂಥ ಧೈರ್ಯ, ಸ್ಥೈರ್ಯವನ್ನು ಈ ಕಾರ್ಯಾಗಾರದಲ್ಲಿ ಪಡೆದುಕೊಳ್ಳಿ . ಆಗ ಮಾನಸಿಕವಾಗಿ ಕುಗ್ಗಿ ಹೋಗುವುದು ತಪ್ಪುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.   ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂಥ ಒಂದು ಕಾರ್ಯಕ್ರಮ ಹಾಕಿಕೊಂಡಿರುವುದು ಅರ್ಥಪೂರ್ಣವಾಗಿದೆ.    ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಈ ಕಾರ್ಯಕ್ರಮ ತಲುಪಬೇಕು ಎಂದರು. 

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಯಕ್ಷಿತ್ ಯುವ ಫೌಂಡೇಶನ್ನನ ಅಂತರಾಷ್ಟ್ರೀಯ ಟೈಕೊಂಡೋ ತರಬೇತುದಾರ ಶ್ರೀಪಾದ ರಾವ್ ಅವರು  ಮಾತನಾಡುತ್ತಾ, ಪಿ ಎಂ ಉಷಾ ಮೇರು ಯೋಜನೆಯಡಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುಂತಹ  ಇಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಮನಸ್ಸನ್ನು ಪ್ರಕ್ಷುಬ್ಧಗೊಳಿಸದೇ  ಶಾಂತಿಯಿಂದ ಇರಬೇಕು. ಸಮಾಜದ ಸಮಸ್ಯೆಗಳನ್ನು ಎದುರಿಸಲು ಪ್ರತಿಯೊಬ್ಬರು ಸಿದ್ಧರಾಗಬೇಕು. ತಮ್ಮ ಆತ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕು. ಅಂಥ   ಕೌಶಲ್ಯಗಳನ್ನು ನಾವು ಇಲ್ಲಿ ನೀಡಲಿದ್ದೇವೆ.  ಜೊತೆಗೆ ಪ್ರಾಕೃತಿಕವಾಗಿ  ತುರ್ತು ಪರಿಸ್ಥಿತಿಯಲ್ಲಿ ತಮ್ಮನ್ನು  ತಾವು ಹೇಗೆ ರಕ್ಷಿಸಿಕೊಳ್ಳುವುದರ ಜೊತೆಗೆ ಜೀವರಕ್ಷಕ  ತಂತ್ರೋಪಾಯಗಳನ್ನು ಹೇಳಿಕೊಡುತ್ತಿದ್ದೇವೆ  ಎಂದರು. 

ಪ್ರಾಚಾರ್ಯ ಪ್ರೊ. ಎಸ್‌. ಸಿ. ಪಾಟೀಲ್ ಅವರು ಇದೊಂದು ಅತ್ಯುತ್ತಮ ಕಾರ್ಯಕ್ರಮ. ಇದು ವಿದ್ಯಾರ್ಥಿನಿಯರಿಗೆ ಹೊಸತನ್ನು ಕಲಿಯುವ ವೇದಿಕೆ. ವಿದ್ಯಾರ್ಥಿನಿಯರು ಇಲ್ಲಿ ಕಲಿತಿರುವ ಜ್ಞಾನವನ್ನು ಆಪತ್ಕಾಲದಲ್ಲಿ ಬಳಸಿಕೊಳ್ಳಿ. ನಿಮ್ಮಲ್ಲಿ ಇರುವ ಕೌಶಲ್ಯಗಳೇ  ನಿಮ್ಮನ್ನು  ರಕ್ಷಣೆ ಮಾಡುತ್ತದೆ. ಸಾಧ್ಯವಾದಷ್ಟು ಜಗಳ ಅಥವಾ ಅಪಾಯಕಾರಿ ಸ್ಥಳಗಳಿಂದ ದೂರವಿರುವುದು ಒಳ್ಳೆಯದು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು. ರಾಚವಿ ಮಹಿಳಾ ಸಬಲೀಕರಣ ಕೋಶದ ನಿರ್ದೇಶಕರಾದ ಪ್ರೊ. ಚಂದ್ರಿಕಾ ಕೆ.ಬಿ. ಅವರು  ಇದೊಂದು ವಿಶಿಷ್ಟ ಕಾರ್ಯಕ್ರಮ. ಇದು ವಿದ್ಯಾರ್ಥಿಗಳಿಗೆ ಸಮಕಾಲೀನ ಸಂದರ್ಭದಲ್ಲಿ ತುಂಬಾ ಅವಶ್ಯಕವಾಗಿದೆ. ಎಲ್ಲಾ ವಿದ್ಯಾರ್ಥಿನಿಯರು ಸದುಪಯೋಗವಾಗುವಂತ ಕಾರ್ಯಕ್ರಮ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು. 

ರಾಚವಿ ಕ್ರೀಡಾ ವಿಭಾಗದ ನಿರ್ದೇಶಕರಾದ ಸಹ ಪ್ರಾಧ್ಯಾಪಕ ಡಾ. ಜಗದೀಶ್ ಗಸ್ತಿ ಸ್ವಾಗತಿಸಿದರು. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಕರುಣಾ ಅಮೃಸ್ಕರ್ ನಿರೂಪಿಸಿದರು. ಮಹಿಳಾ ಸಬಲೀಕರಣದ ಸದಸ್ಯ ಕಾರ್ಯದರ್ಶಿ ಡಾ. ಅಶ್ವಿನಿ ಜಾಮೂನಿ ವಂದಿಸಿದರು.  ಡಾ. ಸುಮನಾ ಮುದ್ದಾಪುರ, ಝೂಡೋದಲ್ಲಿ ರಾಜ್ಯದ ಏಕಲವ್ಯ ಪ್ರಶಸ್ತಿ ವಿಜೇತೆ ರೋಹಿಣಿ ಪಾಟೀಲ್, ಸಮಾಜಸೇವಕ ಪದ್ಮಪ್ರಸಾದ ಹೂಲಿ, ಅವದೂತ್ ಪಿ., ವೈಭವ್ ಪಾಟೀಲ್, ಸ್ವಪ್ನಿಲ್ ಪಾಟೀಲ್ ಹಾಗೂ ಸಿಬ್ಬಂದಿಗಳು ಮತ್ತು  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.