ಯಾದಗಿರಿ, ಜೂ 14,ಕೊರೋನಾ ಸೋಂಕು ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೋವಿಡ್ - 19 ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಿ ಅವರ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.ಯಾದಗಿರಿ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರಿದ್ದು, ಒಟ್ಟು ಸಂಖ್ಯೆ 735ಕ್ಕೆ ಏರಿಕೆಯಾಗಿದೆ. ಮೇ ವರೆಗೆ ಯಾವ ಪ್ರಕರಣ ಇರಲಿಲ್ಲ. ಮಹಾರಾಷ್ಟ್ರ ದಿಂದ ಬಂದವರಿಂದ ಸೋಂಕು ಹರಡಿದೆ ಎಂದರು.
ಜಿಲ್ಲಾಡಳಿತದ ಪರಿಶ್ರಮದಿಂದ ಗ್ರಾಮ ಮಟ್ಟದಲ್ಲಿ ಅರಿವು ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ಆತಂಕದ ಸ್ಥಿತಿಇಲ್ಲ. ಯಾರಲ್ಲೂ ರೋಗದ ಲಕ್ಷಣ ಇಲ್ಲ. ಪ್ರಥಮ ಮತ್ತು ದ್ವೀತಿಯ ಸಂಪರ್ಕಿತರ ಮೇಲೂ ನಿಗಾ ಇರಿಸಲಾಗಿದೆ. ಒಂದು ವಾರದಲ್ಲಿ ಪ್ರಯೋಗಾಲಯ ಕಾರ್ಯಾಚರಣೆ ಮಾಡಲಿದೆ. ಮೆಡಿಕಲ್ ಕಾಲೇಜು ಆರಂಭಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, 435 ಕೋಟಿ ವೆಚ್ಚದ ಕಾಮಗಾರಿಗೆ ಕೆಲ ದಿನಗಳಲ್ಲಿ ಮುಖ್ಯಮಂತ್ರಿ ಅವರಿಂದ ಭೂಮಿ ಪೂಜೆ ಮಾಡಲಾಗುವುದು ಎಂದು ಪ್ರಕಟಿಸಿದರು.ಆಸ್ಪತ್ರೆಗೆ ಬೇಕಾದ ಉಪಕರಣಗಳ ಖರೀದಿಗೆ ಸೂಚಿಸಲಾಗಿದೆ. 150 ಬೋಧಕ ಸಿಬ್ಬಂದಿ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಚಿಕ್ಕಬಳ್ಳಾಪುರ ಮತ್ತು ಯಾದಗಿರಿಗಳಲ್ಲಿ 30 ತಿಂಗಳಿಗೆ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.ಎರಡು ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿರುವುದು ಮೆಚ್ಚುಗೆ ಸಂಗತಿ. ಟಾಸ್ಕ್ ಫೋರ್ಸ್ ಸಮಿತಿಗಳ ಮೂಲಕ ಹಿರಿಯ ನಾಗರಿಕರು ಮತ್ತಿತರರ ರೋಗಿಗಳಿರುವವರ ಮೇಲೆ ಸತತ ನಿಗಾವಹಿಸಲಾಗಿದೆ. ಜಿಲ್ಲಾಡಳಿತದ ಕಾರ್ಯ ವೈಖರಿ ನನ್ನ ಆತಂಕವನ್ನು ನಿವಾರಿಸಿದೆ. ಗ್ರಾಮ ಮಟ್ಟದಲ್ಲಿ ಜನರ ಸಹಕಾರ ಉತ್ತಮ ಮಟ್ಟದಲ್ಲಿ ಇರುವುದು ಶ್ಲಾಘನೀಯ. ಇನ್ನೂ ಕೆಲ ಫೀವರ್ ಕ್ಲಿನಿಕ್ ತೆರೆಯಲು ಸೂಚಿಸಲಾಗಿದೆ. ಹೊರಗಿಂದ ಬಂದವರ ಮೇಲೆ ನಿಗಾ ವ್ಯವಸ್ಥೆ ಇದೇ ರೀತಿ ಮುಂದುವರಿದರೆ, ಕೊರೋನಾ ನಿಗ್ರಹ ಸಾಧ್ಯವಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿದರು.