ಶೇಡಬಾಳ 04: ಶೇಡಬಾಳ ಪಟ್ಟಣದ ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ದಿ. ಜಿನ್ನಪ್ಪಾ ಯಾದವಾಡೆಯವರು ಅಂದು 60 ವರ್ಷಗಳ ಹಿಂದೆ ಅಕ್ಟೋಬರ 2 ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜೀಯವರ ಭಾವಚಿತ್ರವನ್ನು ತಲೆಯ ಮೇಲೆ ಇರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗಾಂಧಿ ಜನ್ಮಜಯಂತಿಯನ್ನು ಆಚರಿಸಿದರೆ, ಇಂದು ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅಂಬಾರಿ ಹೊತ್ತ ಆನೆಯ ಮೇಲೆ ಗಾಂಧಿಜಿಯವರ ಭಾವಚಿತ್ರವಿರಿಸಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ ತಂದೆ ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ದಿ. ಜಿನ್ನಪ್ಪಾ ಯಾದವಾಡೆ ಕುಟುಂಬ ರಾಷ್ಟ್ರಪಿತ ಮಹಾತ್ಮಾ ಗಾಂಧೀಜೀಯವರ ತತ್ವಾದರ್ಶಗಳನ್ನು ಪಾಲಿಸುತ್ತ ಸರಳ ಜೀವನ ಸಾಗಿಸುತ್ತ ಕಳೆದ 60 ವರ್ಷಗಳಿಂದ ಚಾಚೂ ತಪ್ಪದೆ ಗಾಂಧಿ ಜಯಂತಿಯನ್ನು ಆಚರಿಸುತ್ತ ಬಂದಿದೆ. ಅದೇ ಪ್ರಕಾರ ಈ ವರ್ಷ ಬುಧವಾರ ದಿ. 2 ರಂದು ಮಹಾತ್ಮಾ ಗಾಂಧಿಜಿಯವರ ಜನ್ಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿ ಗಾಂಧಿಜಿಯವರ ಬಗ್ಗೆ ಯಾದವಾಡೆ ಕುಟುಂಬಕ್ಕಿರುವ ಅಭಿಮಾನವನ್ನು ಸಾರಿ ಹೇಳಿದ್ದಾರೆ.
ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸ್ವಾತಂತ್ರ್ಯ ಸೇನಾನಿ, ಅಪ್ಪಟ ಗಾಂಧಿವಾದಿ ಜಿನ್ನಪ್ಪ ಯಾದವಾಡೆಯವರು ಕಳೆದ 10 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರ ನಿಧನದ ನಂತರ ಅವರ ಕುಟುಂಬ ವರ್ಗ ಗಾಂಧಿ ಜಯಂತಿಯನ್ನು ಆಚರಣೆ ಪದ್ದತಿಯನ್ನು ಮುಂದುವರಿಸಿಕೊಂಡು ಬಂದಿದೆ.
ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಶೇಡಬಾಳಕ್ಕೆ ಆಗಮಿಸಿದ್ದ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ದಿ. ಜಿನ್ನಪ್ಪ ಯಾದವಾಡೆಯವರು ಗಾಧೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ನಂತರ ಸ್ವಾತಂತ್ರ್ಯ ಸೇನಾನಿಗಳಿಗೆ ಸರಕಾರ ನೀಡುವ ಪಿಂಚಣಿಯನ್ನು ಸೌಜನ್ಯದಿಂದಲೇ ಅವರು ತಿರಸ್ಕರಿಸಿದ್ದರು. ಖಾದಿಧಾರಿಗಳಾಗಿದ್ದ ಜಿನ್ನಪ್ಪ ಯಾದವಾಡೆ ಚಪ್ಪಲಿ ಕೂಡಾ ಧರಿಸುತ್ತಿರಲಿಲ್ಲ. ಗಡಿ ಭಾಗದ ಕರ್ನಾಟಕ ಏಕೀಕರಣ ಸಮಯದಲ್ಲಿ ಇವರು ಮಹಾರಾಷ್ಟ್ರದ ನಾಯಕರಿಗೆ ವಿರೋಧ ವ್ಯಕ್ತ ಪಡಿಸಿ ಶೇಡಬಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದ ನಾಯಕರಲ್ಲಿ ಇವರು ಒಬ್ಬರಾಗಿದ್ದರು. ಇವರು ಕನ್ನಡ ಅಭಿಮಾನಿ, ಸಾಹಿತ್ಯ ಅಭಿಮಾನಿಗಳು ಕೂಡ ಹೌದು. ಗಾಂಧೀಜಿಯವರ ಸಮಕಾಲಿನವರಾದ ಜಿನ್ನಪ್ಪ ಯಾದವಾಡೆ 48 ವರ್ಷಗಳಿಂದ ಗಾಂಧೀಜಯಂತಿಯನ್ನು ಆಚರಿಸಿಕೊಂಡು ಬಂದಿದ್ದರು. ಮೊದಮೊದಲು ದಿ. ಜಿನ್ನಪ್ಪ ಯಾದವಾಡೆಯವರು ಗಾಂಧೀಜಿಯವರ ಭಾವಚಿತ್ರವನ್ನು ತಲೆಯ ಮೇಲೆ ಇರಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಲು ಪ್ರಾರಂಭಿಸಿದರು. ನಂತರ ಸೈಕಲ, ಎತ್ತಿನಗಾಡಿ, ರಿಕ್ಷಾಗಳಲ್ಲಿ ಭಾವಚಿತ್ರ ಇರಿಸಿ ಮೆರವಣಿಗೆ ಕೈಗೊಂಡಿದ್ದರು. 10 ವರ್ಷಗಳ ಹಿಂದಷ್ಟೆ ಜಿನ್ನಪ್ಪ ಯಾದವಾಡೆಯವರು ಯಮಸಲ್ಲೇಖನ ವೃತ ಸ್ವೀಕರಿಸಿ ನಿಧನರಾದರು. ಅವರ ನಿಧನದ ನಂತರ ಅವರ ಪುತ್ರರಾದ ಶ್ರೇಯಾಂಶ, ಬಾಹುಬಲಿ ಯಾದವಾಡೆ ಹಾಗೂ ಕುಟುಂಬ ವರ್ಗ ಗಾಂಧೀ ಜಯಂತಿಯನ್ನು ಆಚರಿಸುತ್ತಿದೆ. ಗಾಂಧೀಜಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮೆರವಣಿಗೆ ಚಾಲನೆ ನೀಡುತ್ತದೆ. ವಾದ್ಯ ವೈಭವದೊಂದಿಗೆ ಪ್ರಾರಂಭಗೊಳ್ಳುವ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವಾಗ ಗ್ರಾಮದ ಸುಮಂಗಲೆಯರು ಗಾಂಧೀಜಿ ಭಾವಚಿತ್ರ ಹೊತ್ತ ವಾಹನಕ್ಕೆ ನೀರು ಹಾಕಿ ಪೂಜೆಸಲ್ಲಿಸಿ ಆರತಿ ಬೆಳಗುತ್ತಾರೆ. ಯಾದವಾಡೆಯವರ ಮನೆಯಿಂದ ಪ್ರಾರಂಭವಾಗುವ ಮೆರವಣಿಗೆ ಮತ್ತೆ ಅವರ ಮನೆಗೆ ಬಂದು ಮುಕ್ತಾಯಗೊಳ್ಳುತ್ತದೆ. ಮೆರವಣಿಗೆ ಮುಂದೆ ವಾದ್ಯವೃಂದ ಮಧ್ಯದಲ್ಲಿ ಗಾಂಧೀಜಿ ಭಾವಚಿತ್ರ ಹೊತ್ತ ವಾಹನ ಅದರ ಹಿಂದೆ ಯಾದವಾಡೆ ಕುಟುಂಬ ಇದು ಮೆರವಣಿಗೆಯ ವೈಶಿಷ್ಟ್ಯ.
ದಿ. ಜಿನ್ನಪ್ಪಾ ಯಾದವಾಡೆಯವರು ಅಂದು 60 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜೀಯವರ ಭಾವಚಿತ್ರವನ್ನು ತಲೆಯ ಮೇಲೆ ಇರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗಾಂಧಿ ಜನ್ಮಜಯಂತಿಯನ್ನು ಆಚರಿಸಿದರೆ, ಇಂದು ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅಂಬಾರಿ ಹೊತ್ತ ಆನೆಯ ಮೇಲೆ ಗಾಂಧಿಜಿಯವರ ಭಾವಚಿತ್ರವಿರಿಸಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ ತಂದೆ ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಯಾದವಾಡೆ ಕುಟುಂಬ ವರ್ಗ ಗಾಂಧಿಜಿಯವರ ಮೇಲಿಟ್ಟಿರುವ ಅತಿಯಾದ ಅಭಿಯಾನವನ್ನು ಸಾಕ್ಷಿಕರಿಸುತ್ತದೆ.
ಬುಧವಾರ ದಿ. 2 ರಂದು ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮುಖಂಡರಾದ ಮಹಾವೀರ ಸಾಬನ್ನವರ ಅಂಬಾರಿ ಹೊತ್ತ ಆನೆ ಮೇಲಿರುವ ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಬಾಹುಬಲಿ ಯಾದವಡೆ, ಶ್ರೇಯಾಂಶ ಯಾದವಾಡೆ, ಜಿನಮತಿ ಬಾಹುಬಲಿ ಯಾದವಾಡೆ, ವಾಸಂತಿ ಶ್ರೇಯಾಂಶ ಯಾದವಾಡೆ, ಜಯಧವಲ ಯಾದವಾಡೆ, ಮಹಾಧವಲ ಯಾದವಾಡೆ, ಹೌಸೆಂದ್ರ ಯಾದವಾಡೆ, ಶ್ರೇಯಾ ಯಾದವಾಡೆ, ರಾಜಶ್ರೀ ಯಾದವಾಡೆ, ಶ್ರೀಮಂತ ಯಾದವಾಡೆ, ಅನಂತಮತಿ ಯಾದವಾಡೆ, ಮಹಾವೀರ ಯಾದವಾಡೆ, ಶ್ರೇಷ್ಠಾ ಯಾದವಾಡೆ ಕುಟುಂಬ ಸದಸ್ಯರು ಸೇರಿದಂತೆ ಸ್ನೇಹಿತರು, ಅಭಿಮಾನಿಗಳು ಹಾಜರಿದ್ದರು.