ಸರ್ಕಾರಿ ಶಾಲೆಗಳ ಶೌಚಾಲಯ ನಿರ್ವಹಣೆ ಗ್ರಾ.ಪಂ, ಪಾಲಿಕೆಗೆ ವಹಿಸಲು ಚಿಂತನೆ: ಸುರೇಶ್ ಕುಮಾರ್ಬೆಂಗಳೂರು, ಮಾ.12 (ಯುಎನ್ಐ) ಪ್ರಸಕ್ತ ವರ್ಷ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಅದರ ನಿರ್ವಹಣೆಯನ್ನು ಗ್ರಾಮಾಂತರ ಭಾಗದಲ್ಲಿ ಗ್ರಾಮ ಪಂಚಾಯತ್ ಹಾಗೂ ನಗರ ವ್ಯಾಪ್ತಿಯಲ್ಲಿ ಪಾಲಿಕೆಗೆ ವಹಿಸುವ ಸಂಬಂಧ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಮೈದಾನ ಸೇರಿದಂತೆ ಮೂಲಸೌಕರ್ಯ ಒದಗಿಸಲು ಸುಮಾರು 4000 ಕೋಟಿ ರೂಪಾಯಿ ಅಗತ್ಯವಿದೆ. ಖಾಸಗಿ ಕಂಪನಿಗಳ, ಸಿಎಸ್ಆರ್ ಫಂಡ್ನಿಂದ ಇಷ್ಟು ದೊಡ್ಡ ಹಣ ಹರಿದುಬರುವುದಿಲ್ಲ. ಆದರೂ ಸಿಎಸ್ಆರ್ ನಿಧಿಯಿಂದ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದು ನಗರ ಪ್ರದೇಶಗಳ ಶಾಲೆಗಳಿಗೆ ಮಾತ್ರ ಸಾಧ್ಯವಾಗಲಿದೆ. ಆದರೆ ಗ್ರಾಮಾಂತರ ಭಾಗದ ಶಾಲೆಗಳಿಗೆ ಈ ಅನುದಾನ ಸಿಗುವುದಿಲ್ಲ ಎಂದರು.ಆದರೂ ಈ ವರ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಶೌಚಾಲಯಗಳನ್ನು ಗ್ರಾಮ ಪಂಚಾಯತ್ಗಳಿಗೆ ಮತ್ತು ಪಾಲಿಕೆಗಳಿಗೆ ನಿರ್ವಹಣೆ ಹೊಣೆ ವಹಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಸದಸ್ಯರು ಸರ್ಕಾರಿ ಶಾಲೆಗಳ ಶೌಚಾಲಯಗಳ ಕೊರತೆಯನ್ನು ವಿವರಿಸಿ, ಸದನದ ಗಮನ ಸೆಳೆದರು.