ಬೀದರ್ ಘಟನೆ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ-ಡಾ ಸಿ ಎನ್ ಅಶ್ವಥ್ ನಾರಾಯಣ್

ಬೆಂಗಳೂರು, ಫೆ 15:   ಬೀದರ್ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿರುವ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.  

ಶನಿವಾರ ನಗರದ ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಾರ್ವಜನಿಕರು ಮತ್ತು ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಸರ್ಕಾರ ಆಡಳಿತ ಯಂತ್ರವನ್ನು ಯಾವುದೇ ರೀತಿ ದುರುಪಯೋಗ ಮಾಡಿಕೊಂಡಿಲ್ಲ. ಕಾಂಗ್ರೆಸ್ ನಾಯಕರು ಸಿಎಎ, ಎನ್ ಪಿಆರ್, ಎನ್ ಆರ್ ಸಿ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ಕಾಂಗ್ರೆಸ್ ಆಡಳಿತಾವಧಿಗಳಲ್ಲೇ ಜಾರಿಗೆ ತರಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾಪ ಮಾಡಲು ಯಾವುದೇ ವಿಷಯವಿಲ್ಲದೆ, ಈ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿ, ಬಾಯಿಗೆ ಬಂದದ್ದನ್ನು ಮಾತನಾಡುತ್ತಿದ್ದಾರೆ. ಎನ್ ಆರ್ ಸಿ ವಿರೋಧಿಸುತ್ತಿರುವ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಸಮಾಜವನ್ನು ಒಡೆಯಲು ಹೊರಟ್ಟಿದ್ದರು. ಕಾಂಗ್ರೆಸ್ ನಾಯಕರು  ಜನರನ್ನು ದಾರಿ ತಪ್ಪಿಸಿ, ವಿಷ ಬೀಜ ಬಿತ್ತರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.  

ವಿಶ್ವವಿದ್ಯಾಲಯಗಳಲ್ಲಿ ದೇಶದ್ರೋಹದಂತಹ ಕೆಲಸ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.  

ಬಜೆಟ್ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ಎರಡು ದಿನ ಮೀಲಿಟ್ಟಿರುವುದು ಸ್ವಾಗತಾರ್ಹ. ಸಂವಿಧಾನದ ಬಗ್ಗೆ ನೀತಿ ನಿರೂಪಕರು ಚರ್ಚಿಸುವುದಕ್ಕೆ  ವಿಧಾನಮಂಡಲ ಉತ್ತಮ ಸ್ಥಳವಾಗಿದೆ. ಒಂದು ತಿಂಗಳ ಅಧಿವೇಶನದಲ್ಲಿ ಸರ್ಕಾರ ಎಲ್ಲ ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದೆ ಎಂದು ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದರು.