ಸಾಹಿತ್ಯ ಓದುವವರ ಹಿತವನ್ನು ಕಾಪಾಡುತ್ತದೆ: ರಮಾಕಾಂತ ಜೋಶಿ
ಧಾರವಾಡ 13: ಯಾರು ಸಾಹಿತ್ಯ ಒದುತ್ತಾರೆ ಅದು ಅವರ ಹಿತವನ್ನು ಕಾಪಾಡುತ್ತದೆ. ಇದಕ್ಕಾಗಿ ಕೆಲವರು ಇಡೀ ಜೀವನವನ್ನೇ ಮುಡಿಪಾಗಿಟ್ಟವರಿದ್ದಾರೆ ಅಂಥವರಲ್ಲಿ ಗಳಗನಾಥರು ಮತ್ತು ನಾ. ರಾಜಪುರೋಹಿತರು ಮೊದಲಿಗರು ಎಂದು ಹಿರಿಯ ಪ್ರಕಾಶಕರಾದ ರಮಾಕಾಂತ ಜೋಶಿ ಹೆಳಿದರು.
ಅವರು ಕ.ವಿ.ವ ಸಂಘದಲ್ಲಿ ಗಳಗನಾಥ ಹಾಗೂ ನಾ. ರಾಜಪುರೋಹಿತ ಸ್ಮರಣಾರ್ಥ ದತ್ತಿ ಉದ್ಘಾಟಿಸಿ ಮಾತನಾಡಿದರು.
ಗಳಗನಾಥರು ಕಾದಂಬರಿಕಾರರಾಗಿ, ನಾ. ರಾಜಪುರೋಹಿತರು ಇತಿಹಾಸ ಸಂಶೋಧಕರಾಗಿ ಕನ್ನಡಕ್ಕಾಗಿ ಅಹರ್ನಿಸಿ ದುಡಿದರು. ಗಳಗನಾಥರು ಕನ್ನಡದ ದಾಸಯ್ಯ ಮನೆಗೆ ಬಂದಿದ್ದಾನೆ ಎಂದು ಹಾಡುತ್ತಾ ಕನ್ನಡ ಸಾಹಿತ್ಯವನ್ನು ಮನೆಮನೆಗೆ ತಲುಪಿಸಿದರು. ರಾಜಪುರೋಹಿತರು ಎಲ್ಲೆಲ್ಲಿ ಕಲ್ಲಿನಲ್ಲಿ ಅಕ್ಷರಗಳಿವೆ ಇತಿಹಾಸ ಕಟ್ಟಿಕೊಟ್ಟರು ಇವರಿಬ್ಬರು ಕನ್ನಡವನ್ನು ಉದ್ದರಿಸಿದ ಮಹಾನುಭಾವರು. ಕನ್ನಡಕ್ಕಾಗಿಯೇ ಸರ್ವಸ್ವವನ್ನು ಮೀಸಲಾಗಿಟ್ಟದ್ದ ಇವರನ್ನು ಸ್ಮರಿಸಿಕೊಳ್ಳದೇ ಹೋದರೆ ಕೃತಗ್ನರಾಗುತ್ತೇವೆ. ಮುಂದಿನ ಜನಾಂಗದ ಯುವಕರಿಗರ ಕನ್ನಡದ ಬಗ್ಗೆ ಅಭಿಮಾನ ಬೆಳೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದರು.
ಅತಿಥಿ ಉಪನ್ಯಾಸಕ ಹರ್ಷ ಡಂಬಳ ಗಳಗನಾಥರ ಬದುಕು-ಬರಹ ಕುರಿತು ಮಾತನಾಡಿ, ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರೇ ಗಳಗನಾಥರು. ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. 73 ವರ್ಷ ಬಾಳಿದ ಇವರನ್ನು ಸಾಹಿತಿಗಳನ್ನಾಗಿ ರೂಪಿಸಿದವರು ರಾ.ಹ.ದೇಶಪಾಂಡೆ ಹಾಗೂ ಧಾರವಾಡದ ಟ್ರೇನಿಂಗ ಕಾಲೇಜ. ಗಳಗನಾಥರಿಗೆ ಬರವಣಿಗೆಯೇ ಉಸಿರಾಗಿತ್ತು. ಪ್ರಾಚಾರ್ಯ ಕರಂದೀಕರ್ ಗಳಗನಾಥರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಾಲದ ಹೊರೆ ತೀರಿಸಲು ಬರವಣಿಗೆ ಪ್ರಾರಂಭಿಸಿ ತಮ್ಮ ಕೃತಿಗಳ ಗಂಟು ಹೊತ್ತು ಹಳ್ಳಿಯಿಂದ ಹಳ್ಳಿಗೆ ಮನೆಯಿಂದ ಮನೆಗೆ ಸಂಚರಿಸಿ ಮಾರಾಟ ಮಾಡಿದರು. ಕೆಲಸಲ ಅವಮಾನವನ್ನು ಅನುಭವಿಸಿದರು. ಅವರು ಬರೆದ ಮಾಧವ ವಿಲಾಸ ಕರುಣ ಎಂಬುದು ಪ್ರಬುದ್ದ ಕೃತಿಯಾಗಿದ್ದು ವಿಜಯ ನಗರ ಸ್ಥಾಪನೆ ಹಿನ್ನೆಲೆ ಒಳಗೊಂಡಿದೆ. ಒಟ್ಟು 24 ಕಾದಂಬರಿ ರಚಿಸಿದ್ದು ಅದರಲ್ಲಿ ಅನುವಾದ ಕೃತಿಗಳೂ ಇವೆ ಎಂದರು..
ಡಾ. ಗುರುಪಾದ ಮರಿಗುದ್ದಿ ನಾ. ರಾಜಪುರೋಹಿತರ ಬಗ್ಗೆ ಮಾತನಾಡಿ, ರಾಜಪುರೋಹಿತರು ಕರ್ನಾಟಕದ ಸಂಶೋಧನೆಯ ಯುಗ ಪರ್ವತಕರು ಸಂಶೋಧನಾ ಕ್ಷೇತ್ರಕ್ಕೊಂದು ಶಿಸ್ತು ಚೌಕಟ್ಟು ಹಾಕಿದವರಾಗಿದ್ದಾರೆ. ಯಾವದೇ ಸೌಲಭ್ಯವಿಲ್ಲದ ಕಾಲದಲ್ಲಿ ಆಕರಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿದವರು. ಟಿಳಕರ ಕೇಸರಿ ಪತ್ರಿಕೆಯಲ್ಲೂ ಲೇಖನ ಬರೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ನಿರ್ಣಾಯಕ ಯುದ್ದ ನಡೆದ್ದು ತಾಳೀಕೊಟೆ ಅಲ್ಲ, ಆ ಸ್ಥಳ ರಕ್ಕಸತಂಗಡಗಿ ಎಂದು ಪುರಾವೆ ಸಹಿತ ತೋರಿಸಿದರು. ಇತಿಹಾಸದಂತೆ ಆಧ್ಯಾತ್ಮಿಕದಲ್ಲೂ ಅವರಿಗೆ ಆಸಕ್ತಿ ಇತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸುಧೀಂದ್ರ ಕುಲಕರ್ಣಿ ಮಾತನಾಡಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಉಪಸ್ಥಿತರಾದ ಪ್ರೊ. ದುಷ್ಯಂತ ನಾಡಗೌಡ ಪ್ರಾಸ್ತಾವಿಕವಾಗಿ ಪ್ರತಿಷ್ಠಾನ ಕುರಿತು ಮಾತನಾಡಿದರು. ಶಂಕರ ಹಲಗತ್ತಿ ದತ್ತಿ ಪ್ರಾರಂಬ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿ, ಡಾ. ಸಂಜೀವ ಕುಲಕರ್ಣಿ ವಂದಿಸಿದರು.
ಬಸವಪ್ರಭು ಹೊಸಕೇರಿ, ಶ್ರೀನಿವಾಸ ವಾಡಪ್ಪಿ, ಗೀರೀಶ ಪದಕಿ ಸೇರಿದಂತೆ ಸಾಹಿತಿಗಳು ಗಣ್ಯರು ಇದ್ದರು.