ವಿಧಾನ ಪರಿಷತ್ ನಲ್ಲಿ‌"ಬಿಗ್ ಜೀರೋ" ಕುರಿತು ಸ್ವಾರಸ್ಯಕರ ಚರ್ಚೆ...!

ಬೆಂಗಳೂರು, ಮಾ.9, ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಜೀರೋ ವಿಷಯದ ಕುರಿತು ಸ್ವಾರಸ್ಯಕರ‌ಚರ್ಚೆ ನಡೆಯಿತು.ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಜೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ತಯಾರಿರಲಿಲ್ಲ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ‌ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರ ಶಕ್ತಿಯ ಬಗ್ಗೆ‌ವಿಷಯ ಪ್ರಸ್ತಾಪವಾಯಿತು. ಪ್ರತಿಪಕ್ಷ ನಾಯಕ‌ಎಸ್.ಆರ್.ಪಾಟೀಲ್ ಮಾತ‌ನಾಡುತ್ತಾ, ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ, ಹಿಂದೆ ಆಳುವ ಪಕ್ಷವಾಗಿದ್ದ ಬಿಜೆಪಿ ನಂತರ ವಿರೋಧ ಪಕ್ಷವೂ ಆಗದಂತಾಗಿತ್ತು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು ಕಾರಣ ಹಾಗಾಗಿ ಬಿಜೆಪಿ ಮೈನಸ್ ಯಡಿಯೂರಪ್ಪ ಬಿಗ್ ಜೀರೋ ಎಂದರು.ಈ ವೇಳೆ ಬಿಜೆಪಿ‌ಸದಸ್ಯೆ ತೇಜಸ್ವಿನಿಗೌಡ ,ಸಿದ್ದರಾಮಯ್ಯ ಮೈನಸ್ ಕಾಂಗ್ರೆಸ್ ಜೀರೋ‌ಅಂತಾ‌ಒಪ್ಪಿಕೊಳ್ತೀರಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ದೈತ್ಯ ಶಕ್ತಿ. ಯಡಿಯೂರಪ್ಪ ಬಿಜೆಪಿ‌ಜೊತೆ ಇದ್ದರೆ ಸಂಖ್ಯೆಯ ಬಲಗಡೆಯ ಜೀರೋ ಇರಲಿದೆ, ಅವರನ್ನು‌ಇಳಿಸುವಾಗ ಈ ಕಾಳಜಿ ಇರಲಿಲ್ಲವೇ?.ನಾಯಕರು ಮತ್ತು ಪಕ್ಷ ಸೇರಿದಾಗಲೇ ಪಕ್ಷ ಬಲಗೊಳ್ಳುವುದು, ಸೋನಿಯಾಗಾಂಧಿ, ಕುಮಾರಸ್ವಾಮಿ, ಜೀರೋ ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನ ಬಸವರಾಜ ಹೊರಟ್ಟಿ, ಅದೆಲ್ಲಾ ಬೇಡ ಯಡಿಯೂರಪ್ಪ ಮೈನಸ್ ಬಿಜೆಪಿ ಜೀರೋ ಹೌದೋ ಅಲ್ಲವೋ ಅನ್ನುವುದನ್ನು ಹೇಳಿ ಎಂದರು.ಬಿಜೆಪಿ‌ಸದಸ್ಯ ಪ್ರಾಣೇಶ್ ಮಾತನಾಡಿ, ನಮ್ಮಲ್ಲಿ‌ಎಲ್ಲರೂ ನಾಯಕರೇ, ಹಿಂದೆ ಅಟಲ್ ಬಿಹಾರಿ ವಾಜಪೇಯಿ ನಮ್ಮ ಹೀರೋ ಆಗಿದ್ದರು, ಈಗ‌ನರೇಂದ್ರ ಮೋದಿ‌ನಮ್ಮ ಹೀರೋ ಆಗಿದ್ದಾರೆ.ಹಾಗೆಯೇ ಇಲ್ಲಿಯೂ‌ಈಗ ಯಡಿಯೂರಪ್ಪ ನಮ್ಮ ಹೀರೋ ನಂತರದಲ್ಲಿ ಮುಂದೆ ಬರುವವರು ನಮ್ಮ ಹೀರೋ, ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ, ಒಂದು ಕುಟುಂಬದವರೇ ಹೀರೋ ಅಲ್ಲ ಎಂದು ತಿರುಗೇಟು ನೀಡಿದರು.

ಇದಕ್ಕೆ‌ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ‌ಎಸ್.ಆರ್. ಪಾಟೀಲ್, ನಾನು ನಮಗೆ ಅನಿಸಿದ್ದು ಹೇಳಿದ್ದೇನೆ  ಯಡಿಯೂರಪ್ಪ ಮೈನಸ್ ಬಿಜೆಪಿ ಜೀರೋ ಅಲ್ಲ ಅಂದರೆ ಇಲ್ಲ‌ಅಂತಾ ಹೇಳಿ ನಮಗೇನು ಅಭ್ಯಂತರ ಇಲ್ಲ ಎಂದು ಬಿಜೆಪಿ‌ಸದಸ್ಯರ ಕೆರಳಿಸುವ ಪ್ರಯತ್ನ ನಡೆಸಿದರು.ಈ ವೇಳೆ ಮಾತನಾಡಿದ‌ಬಿಜೆಪಿ ಸದಸ್ಯ ಲೆಹರ್ ಸಿಂಗ್,  ಕಾಂಗ್ರೆಸ್ ಪಕ್ಷವೇ ಬಿಗ್ ಜೀರೋ‌ಆಗಿದೆ ಹಾಗಾಗಿ ಸಿದ್ದರಾಮಯ್ಯ, ಡಿ.ಕೆ‌ಶಿವಕುಮಾರ್ ತರಹದ ನಾಯಕರು ಅಲ್ಲಿ ಜೀರೋ ಆಗಿದ್ದಾರೆ ಅವರು ಅಲ್ಲಿಂದ‌ಹೊರ ಬಂದರೆ ನಾಯಕರಾಗುತ್ತಾರೆ ಎಂದರು.ಲೆಹರ್ ಸಿಂಗ್ ಆರೋಪವನ್ನು ತಳ್ಳಿಹಾಕಿದ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಶೂನ್ಯ ಅಂತಾರೆ ಆದರೆ ಸ್ವಾತಂತ್ರ್ಯ ತಂದ ಪಕ್ಷ ನಮ್ಮದು, ಸಂವಿಧಾನ ಕೊಟ್ಟ ಪಕ್ಷ ನಮ್ಮದು ಹಾಗಾಗಿ ನಮಗೆ‌ನಮ್ಮ‌ಪಕ್ಷದ ಬಗ್ಗೆ ಹೆಮ್ಮೆ ಇದೆ ಎಂದು ಬಿಗ್ ಜೀರೋ ಚರ್ಚೆಗೆ ತೆರೆ ಎಳೆದರು.