ರಾಯಬಾಗ, 01 : ಪ.ಜಾತಿ ಮತ್ತು ಪಂಗಡ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸರ್ಕಾರದಿಂದ ನೀಡುತ್ತಿರುವ ಉಚಿತ ಮೀನು ಹಿಡಿಯುವ ಸಲಕರಣೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಗುರುವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ಮೀನು ಮಾರುಕಟ್ಟೆ ಮತ್ತು ಮತ್ಸ್ಯವಾಹಿನಿ ಯೋಜನೆಯಡಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಬೋರ್ಡ್‌ದಿಂದ ಫಲಾನುಭವಿ ಮೀನುಗಾರರಿಗೆ ಉಚಿತ ಮೀನುಗಾರಿಕೆ ಕಿಟ್ ಮತ್ತು ಮತ್ಸ್ಯವಾಹಿನಿ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 25 ಬಡ ಮೀನುಗಾರರಿಗೆ ಮತ್ಸ್ಯ ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ರಂಗನಾಥ ಶಿಂಧೆ ಮಾತನಾಡಿ, ಜಿ.ಪಂ.ಯೋಜನೆಯಡಿ ಪ್ರತಿ ತಾಲೂಕಿನ ಇಬ್ಬರು ಪ.ಜಾತಿ ಮತ್ತು ಇಬ್ಬರು ಪ.ಪಂಗಡ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಜೀವರಕ್ಷಕ ಕವಚ (ಜಾಕೇಟ್), ಬಲೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನೀಲ ಹಂಜೆ, ವಿನೋದ ಹಿರೇಮಠ, ಮಹೇಶ ಕರಮಡಿ, ಶ್ರವಣ ಕಾಂಬಳೆ, ಸಂಜಯ ಸನದಿ ಸೇರಿ ಅನೇಕರು ಇದ್ದರು.