ಗೋವಾ ವಿಧಾನಸಭೆ ಮಾಜಿ ಸಚಿವೆ ವಿಕ್ಟೋರಿಯಾ ಫರ್ನಾಂಡಿಸ್ ವಿಧಿವಶ

       ಪಣಜಿ, ಸೆ 7:  ಗೋವಾ ವಿಧಾನಸಭೆ ಮಾಜಿ ಡೆಪ್ಯುಟಿ ಸ್ಪೀಕರ್ ಮತ್ತು ಮಾಜಿ ಸಚಿವೆ ವಿಕ್ಟೋರಿಯಾ ಫರ್ನಾಂಡಿಸ್ ಶನಿವಾರ ಬೆಳಗಿನ ಜಾವ ದೀರ್ಘಾವಧಿ ಅನಾರೋಗ್ಯದ ನಂತರ ನಿಧನರಾದರು; ಅವರಿಗೆ 85 ವರ್ಷ ವಯಸ್ಸಾಗಿತ್ತು.    ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.    ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಮೊದಲಾದ ಖಾತೆಗಳ ಹೊಣೆಯನ್ನು ನಿಭಾಯಿಸಿದ್ದರು.  2005 ರ ಜುಲೈ 8 ರಿಂದ 2007 ರ ಜೂನ್ 8 ರವರೆಗೆ ಅವರು ಗೋವಾ ವಿಧಾನಸಭೆಯ ಉಪಸಭಾಧ್ಯಕ್ಷೆಯಾಗಿದ್ದರು.     ಸೇಂಟ್ ಕ್ರೂಜ್ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ಸಮಾಜದ ದುರ್ಬಲವರ್ಗದವರ ಹಿತಕ್ಕಾಗಿ ಶ್ರಮಿಸಿದರು. ಯುವಜನ ಅಭಿವೃದ್ಧಿ ಹಾಗೂ ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸಿದ್ದರು. ಯೋಜನಾ ಅಭಿವೃದ್ಧಿ ಪ್ರಾಧಿಕಾರಗಳಡಿ ಪಂಚಾಯತ್ ಪ್ರದೇಶಗಳ ಸೇರ್ಪಡೆ, ಬಂಗುನಿಮ್ ಬಳಿ ಕಸ ಸಂಗ್ರಹ ಮೊದಲಾದವುಗಳಿಗೆ ವಿರೋಧ ವ್ಯಕ್ತಪಡಿಸಿ ಅವರು ಪ್ರತಿಭಟನೆ ನಡೆಸಿದ್ದರು. ಕೊಂಕಣಿಗೆ ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ಗೋವಾಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ತಂದುಕೊಡುವ ಹೋರಾಟದಲ್ಲಿ 1966 ರಿಂದ 1987 ರ ವರೆಗೆ ಸುಮಾರು 21 ವರ್ಷಗಳ ಕಾಲ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.