ನವದೆಹಲಿ, ಆ 16 ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಶುಕ್ರವಾರ ಇಲ್ಲಿರುವ ಅವರ "ಸದೈವ್ ಅಟಲ್" ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಗೌರವ ನಮನ ಸಲ್ಲಿಸಿದರು.
ಬಿಜೆಪಿಯ ರಾಷ್ಟ್ರೀಯ ಕಾರ್ಯಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಹಲವು ಕೇಂದ್ರ ಸಚಿವರು, ವಾಜಪೇಯಿ ಅವರ ಕುಟುಂಬದ ಸದಸ್ಯರು ಕೂಡ ವಾಜಪೇಯಿ ಸ್ಮಾರಕದ ಬಳಿ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಇತರ ಬಿಜೆಪಿ ನಾಯಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತಿ ಗೀತೆಗಳನ್ನು ಹಾಡಲಾಯಿತು, ಪ್ರತಿಯೊಬ್ಬರೂ ಅಗಲಿದ ನಾಯಕನನ್ನು ಸ್ಮರಿಸಿದರು.
ಭಾರತದ ರಾಜಕೀಯದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದ ವಾಜಪೇಯಿ ಕಳೆದ ವರ್ಷ ಆಗಸ್ಟ್ 16 ರಂದು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು ಪೂರ್ಣ ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ ಮೊದಲ ಕಾಂಗ್ರೆಸ್ಯೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.