ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ವಿದೇಶಿಯ ನೋಟುಗಳು ಪತ್ತೆ

Foreign currencies found in the hundi of Savadatti Yallamma temple

ಬೆಳಗಾವಿ : ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ವಾಗಿರುವ ಸವದತ್ತಿಯ ಶ್ರೀ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಿಗೆ ಆಗುತಿದ್ದು, ಈ ಬಾರಿ ದೇವಸ್ಥಾನಕ್ಕೆ ಭಕ್ತರು ಸಲ್ಲಿಸಿದ್ದ ಕಾಣಿಕೆ ಹುಂಡಿಯನ್ನು ಎಣಿಕೆ ಮಾಡಲಾಗಿದೆ. ಈ ಎಣಿಕೆಯಲ್ಲಿ 

5.85 ಲಕ್ಷ ರೂ. ಮೌಲ್ಯದ ಚಿನ್ನ, 1.35 ರೂ. ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ 71.34 ಲಕ್ಷ ರೂ.ನಗದು ಸಂಗ್ರಹವಾಗಿದೆ.

  ದೇವಸ್ಥಾನದ ಕಾಣಿಕೆಯ ಹುಂಡಿಯಲ್ಲಿ ವಿದೇಶಿ ನೋಟುಗಳು ಪತ್ತೆಯಾಗಿರುವುದು ವಿಶೇಷವಾಗಿದೆ. ಭಾರತದ ನೆರೆಯಲ್ಲಿರುವ ಭೂತಾನ್ ಮತ್ತು ನೇಪಾಳ ದೇಶದ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

   ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಾಧಿಕಾರ ರಚಿಸಿದ ನಂತರ ಮೊದಲ ಬಾರಿ ನಡೆದ ಹುಂಡಿ ಎಣಿಕೆ ಇದಾಗಿದೆ. ಸರಕಾರಿ ಅನುದಾನದ ಜೊತೆಗೆ ಭಕ್ತರ ಕಾಣಿಕೆ ಹಣವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.

  ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಹುದೊಡ್ಡ ಇತಿಹಾಸ ಇದ್ದು, ಈ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವುದು ವಿಶೇಷವಾಗಿದೆ.