ಜಾನಪದ ಸಂಸ್ಕೃತಿ ರಕ್ಷಿಸಿ ಪೋಷಿಸಬೇಕು: ಡಾ. ಎ.ಐ.ಹಂಜಗಿ

Folk culture should be protected and nurtured: Dr. A.I. Hanjagi

ವಿಜಯಪುರ 28: ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಮದುವೆ, ಸೀಮಂತ ಮತ್ತು ತೊಟ್ಟಿಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಜಾನಪದ ಉತ್ಸವ-2025 ರ ಅಂಗವಾಗಿ ಆಯೋಜಿಸಿದ ವಿವಿದ ಜಾನಪದ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ನಮ್ಮ ನಾಡಿನ ಸ್ತ್ರೀ ಜೀವನದ ಒಳಗನ್ನಡಿ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಂಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಕೌಟುಂಬಿಕ ರಸವು ಪರಿಪಾಕಗೊಂಡಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದೆ. ಜನಪದ ಸಾಹಿತ್ಯದಲ್ಲಿ ತಾಯಿ-ಮಗುವಿನ ಮಮತೆ, ಗಂಡ-ಹೆಂಡತಿಯರ ನಡುವಿನ ಪ್ರೇಮ, ಮಗಳು ತವರಿನಿಂದ ಗಂಡನ ಮನೆಗೆ ಹೋಗುವಾಗ ಕಲಿಸುವ ನೀತಿಪಾಠ, ಹಿತೋಪದೇಶ, ಹಾರೈಕೆ, ಜನಜೀವನ, ಜೀವನ ಶೈಲಿ, ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಗಳ ಬಗ್ಗೆ ಹಾಡಿನ ಮೂಲಕ ತಿಳಿಸಿ ಕೊಡುತ್ತಿರುವ ಗರತಿಯ ಜಾನಪದ ಹಾಡುಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸಿ ಹೋಗುತ್ತಿವೆ, ಆಧುನಿಕತೆಯ ಸೋಗಿನಲ್ಲಿ ನಾವಿಂದು ಟಿ.ವ್ಹಿ ಧಾರವಾಹಿ, ರಿಯಾಲಿಟಿ ಶೋ, ಚಲನಚಿತ್ರ, ಮೋಬೈಲ್, ವ್ಯಾಟ್ಸಾಪ್, ಫೇಸ್‌ಬುಕ್, ಟಿಕ್‌ಟಾಕ್, ಡಬ್‌ಶ್ಮ್ಯಾಶ್‌ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಸಂಸ್ಕೃತಿ ಮತ್ತು ನಮ್ಮತನ ಮಾಯವಾಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.  

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ. ಬಾಳನಗೌಡ ಪಾಟೀಲ, ಮಾತನಾಡಿ, ಜನಪದ ಸಾಹಿತ್ಯವು ನಮ್ಮ ಪರಂಪರೆ, ಸಂಪ್ರದಾಯ, ಪದ್ಧತಿ, ಆಚರಣೆ, ಹಳ್ಳಿಗಾಡಿನ ಬದುಕು-ಸೊಗಡು, ಜನರ ಬದುಕು ರೀತಿ-ನೀತಿ, ಸಂಸ್ಕೃತಿ-ಸಂಸ್ಕಾರ, ಮಾನವೀಯ ಮೌಲ್ಯ, ಜೀವನ ನಿರ್ವಹಣೆ, ಹೆಣ್ಣು ಮಕ್ಕಳನ್ನು ಪೂಜ್ಯ ಭಾವನೆಯಿಂದ ಕಾಣುವ, ಹಿರಿಯರನ್ನು ಗೌರವಿಸುವ, ತಾಯಿ-ಮಗುವಿನ ಪ್ರೀತಿ, ವಾತ್ಸಲ್ಯ ಮತ್ತು ಮಮತೆ, ಗಂಡ-ಹೆಂಡಿರ ಸರಸ-ಸಲ್ಲಾಪದಂತಹ ಪ್ರಸಂಗಗಳನ್ನು ಹಾಡಿನ ಮೂಲಕ ಮಾನವೀಯ ಸಂಬಂಧಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ಅರಿತುಕೊಂಡು ನಾವೆಲ್ಲರೂ ಯುವ ಜನಾಂಗವು ಬದುಕಿನಲ್ಲಿ ಅನುಸರಣೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ. ನಮ್ಮ ಸಂಪ್ರದಾಯದ ಮೌಲ್ಯವನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಜನಪದ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ ಎಂದರು.  

ಕಾಖಂಡಕಿಯ ಕಮಲವ್ವ ಸಿದರಡ್ಡಿ ಚೌಡಕಿ ತಂಡದವರನ್ನು ಸತ್ಕರಿಸಲಾಯಿತು. ಅವರು ವಿವಿಧ ಚೌಡಕಿ ಹಾಡುಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು.  

ವಿದ್ಯಾರ್ಥಿಗಳಿಗಾಗಿ ಗೋಲಿ, ಬುಗುರಿ, ಲಗೋರಿ, ಹಗ್ಗ ಜಗ್ಗಾಟ ಜಾನಪದ ಕ್ರೀಡಾ ಸ್ಪರ್ಧೆಗಳನ್ನು ಮತ್ತು ಜಾನಪದ ಗೀತೆ, ದೇಶಿ ಆಹಾರ ತಯಾರಿಕೆ, ಜಾನಪದ ವಸ್ತು ಪ್ರದರ್ಶನ, ಜಾನಪದ ನೃತ್ಯ ಮತ್ತು ವೇಷ-ಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  

ಹಿರಿಯ ಪ್ರಾಧ್ಯಾಪಕ ಪ್ರೊ. ಎಂ.ಎಸ್‌.ಖೊದ್ನಾಪೂರ, ಡಾ. ಬಿ.ಎನ್‌.ಶಾಡದಳ್ಳಿ, ಡಾ. ರೋಹಿಣಿ ಹಿರೇಶೆಡ್ಡಿ, ಡಾ. ರಮೇಶ ತೇಲಿ, ಪ್ರೊ. ಆರ್‌.ಎಸ್‌.ಕುರಿ, ಡಾ. ಎಸ್‌.ಆರ್‌.ಯಂಬತ್ನಾಳ, ಪ್ರೊ. ಅಶ್ವಿನಿ ರಾಮಪುರ, ಪ್ರೊ. ರೂಪಾ ಕಮದಾಳ, ಲೀಲಾ ವ್ಹಿ.ಟಿ. ಇನ್ನಿತರರು ಸಹ ವೇದಿಕೆಯ ಮೇಲಿದ್ದರು.