ಲೋಕದರ್ಶನ ವರದಿ
ಜನಪದ ಸಾಹಿತ್ಯ ಜನವಾಣಿಯ ಬೇರು: ರೆಬಿನಾಳ
ವಿಜಯಪುರ 19: ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಮದುವೆ, ಸೀಮಂತ ಮತ್ತು ತೊಟ್ಟಿಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದುಸಾಹಿತಿ ಮಹಾದೇವ ರೆಬಿನಾಳ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾ ಕಾಲನಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ 2 ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ “ಜನಪದ ಸಾಹಿತ್ಯ ಮತ್ತು ಸಂಸ್ಕೃತಿ” ವಿಷಯ ಕುರಿತ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ನಮ್ಮ ನಾಡಿನ ಸ್ತ್ರೀ ಜೀವನದ ಒಳಗನ್ನಡಿ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಂಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಕೌಟುಂಬಿಕ ರಸವು ಪರಿಪಾಕಗೊಂಡಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದೆ. ಜನಪದ ಸಾಹಿತ್ಯದಲ್ಲಿ ತಾಯಿ-ಮಗುವಿನ ಮಮತೆ, ಗಂಡ-ಹೆಂಡತಿಯರ ನಡುವಿನ ಪ್ರೇಮ, ಮಗಳು ತವರಿನಿಂದ ಗಂಡನ ಮನೆಗೆ ಹೋಗುವಾಗ ಕಲಿಸುವ ನೀತಿಪಾಠ, ಹಿತೋಪದೇಶ, ಹಾರೈಕೆ, ಜನಜೀವನ, ಜೀವನ ಶೈಲಿ, ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಗಳ ಬಗ್ಗೆ ಹಾಡಿನ ಮೂಲಕ ತಿಳಿಸಿ ಕೊಡುತ್ತಿರುವ ಗರತಿಯ ಜಾನಪದ ಹಾಡುಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸಿ ಹೋಗುತ್ತಿವೆ, ಆಧುನಿಕತೆಯ ಸೋಗಿನಲ್ಲಿ ನಾವಿಂದು ಟಿ.ವ್ಹಿ ಧಾರವಾಹಿ, ರಿಯಾಲಿಟಿ ಶೋ, ಚಲನಚಿತ್ರ, ಮೋಬೈಲ್, ವ್ಯಾಟ್ಸಾಪ್, ಫೇಸ್‌ಬುಕ್, ಟಿಕ್‌ಟಾಕ್, ಡಬ್‌ಶ್ಮ್ಯಾಶ್‌ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಸಂಸ್ಕೃತಿ ಮತ್ತು ನಮ್ಮತನ ಮಾಯವಾಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಎಂದು
ಅವರು ಮಾತನಾಡುತ್ತಾ, ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ. ಆಕೆಯು ಮದುವೆಯಾದ ನಂತರ ತವರುಮನೆ, ಗಂಡನ ಮನೆಯಲ್ಲಿ ಹೇಗೆ ಸಂಸಾರ ಮಾಡಬೇಕೆಂಬ ಬಗ್ಗೆ ಹಾಡುಗಳ ಮೂಲಕ ಕಿವಿಮಾತು ಹೇಳುತ್ತಾ, ಆಕೆಗಿರುವ ಸ್ಥಾನಮಾನ, ಗೌರವಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಾನಪದ ಸಾಹಿತ್ಯವು ಪ್ರಮುಖ ಪಾತ್ರವಹಿಸುತ್ತದೆ. ಗರತಿಯ ಹಾಡುಗಳು ಸ್ತ್ರೀ ಸಮಾಜದಲ್ಲಿ ಹೇಗೆ ಬಾಳಿ ಬದುಕಬೇಕೆಂಬ ಸೂಕ್ಷ್ಮ ವಿಷಯಗಳನ್ನು ವಿವರಿಸಿ ಸ್ತ್ರೀಯು ಗೌರವಯುತ ಜೀವನ-ಸಂಸಾರ ನಡೆಸಿ ಸಮಾಜದ ಕಟ್ಟಳೆಗಳನ್ನು ಮನವರಿಕೆ ಮಾಡಲಾಗುತ್ತಿತ್ತು. ಹಾಲುಂಡ ತವರೀಗಿ ಏನೆಂದ ಹಾಡಲೆ// ಹೊಳೆದಂಡೆಯಲಿರುವ ಕರಕೀಯ// ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ// ಎಂಬ ಸಾಲುಗಳಿಂದ ಒಬ್ಬ ಹೆಣ್ಣು ಮಗಳು ಮದುವೆಯಾದ ನಂತರ ತನ್ನ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ತಾನು ಹುಟ್ಟಿ ಬೆಳೆದ ಮನೆ, ತಂದೆ-ತಾಯಿ, ಅಣ್ಣ-ತಮ್ಮಂದಿರು ಚೆನ್ನಾಗಿ ಬಾಳಿ ಬದುಕಲಿ ಮತ್ತು ತವರು ಮನೆ ರಸಬಳ್ಳಿಯಂತೆ ಎತ್ತರಕ್ಕೆ ಹಬ್ಬಲೆಂದು ಹರಸುತ್ತಾಳೆ ಎಂದರು.
ಡೈಮಂಡ್ ಸೌಹಾರ್ಧ ಸಹಕಾರಿ ಬ್ಯಾಂಕನ ಅಧ್ಯಕ್ಷ ಕಾಶಿನಾಥ ಕಾಮಗಳ ಅವರು ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ದೇವಸ್ಥಾನದ ಅಭಿವೃದ್ಧಿಗೆ ತನು-ಮನ-ಧನದ ಮೂಲಕ ಸಹಾಯ-ಸಹಕಾರ ನೀಡುತ್ತಾ, ಅಳಿಲು ಸೇವೆಯನ್ನು ಸಲ್ಲಿಸಬೇಕು. ಅಂದಾಗ ಮಠ-ಮಂದಿರಗಳು ಇಂತಹ ಅಧ್ಯಾತ್ಮಿಕ-ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಐವತ್ತೊಂದು ಸಾವಿರ ಮೊತ್ತದ ದೇಣಿಗೆ ನೀಡಿದ ಕಾಶಿನಾಥ ಕಾಮಗಳ ಅವರನ್ನು ಸನ್ಮಾನಿಸಲಾಯಿತು.
ಅತಿಥಿ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ಇಡೀ ಜಗತ್ತಿಗೆ ಮಾದರಿಯಾಗಿರುವ ನಮ್ಮ ಪರಂಪರೆ, ಸಂಪ್ರದಾಯ ಮತ್ತು ವಿಶಿಷ್ಟ ಆಚರಣೆ, ಸಂಸ್ಕೃತಿ ಮತ್ತು ನಮ್ಮತನವನ್ನು ಬಿಟ್ಟು ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯರ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಇದರಿಂದ ನಮಗೆ ಒಳ್ಳೆಯ ನೈತಿಕತೆ, ಮಾನವೀಯ ಸಂಬಂಧ ಮತ್ತು ಸಂಸ್ಕಾರ ಮತ್ತು ಮೌಲ್ಯಯುತವಾದ ಬದುಕಿಗೆ ಆಧಾರಸ್ತಂಭವಾಗಿರುವ ಮತ್ತು ಒಬ್ಬ ಸ್ತ್ರೀ ತನ್ನ ಗಂಡನ ಮನೆಯಲ್ಲಿ ಬಾಳಿ-ಬದುಕಬೇಕಾದ ರೀತಿ-ನೀತಿಗಳನ್ನು ತಿಳಿಸಿಕೊಡುವ ಗರತಿಯ ಹಾಡುಗಳನ್ನು ನಾವೆಲ್ಲರೂ ಉಳಿಸಿ-ಬೆಳೆಸಬೇಕಾಗಿದೆ. ಗರತಿಯ ಹಾಡುಗಳು ಮತ್ತು ಜನಪದ ಸಾಹಿತ್ಯವು ನಮ್ಮ ಪರಂಪರೆ, ಸಂಪ್ರದಾಯ, ಪದ್ಧತಿ, ಆಚರಣೆ, ಹಳ್ಳಿಗಾಡಿನ ಬದುಕು-ಸೊಗಡು, ಜನರ ಬದುಕು ರೀತಿ-ನೀತಿ, ಸಂಸ್ಕೃತಿ-ಸಂಸ್ಕಾರ, ಮಾನವೀಯ ಮೌಲ್ಯ, ಜೀವನ ನಿರ್ವಹಣೆ, ಹೆಣ್ಣು ಮಕ್ಕಳನ್ನು ಪೂಜ್ಯ ಭಾವನೆಯಿಂದ ಕಾಣುವ, ಹಿರಿಯರನ್ನು ಗೌರವಿಸುವ, ತಾಯಿ-ಮಗುವಿನ ಪ್ರೀತಿ, ವಾತ್ಸಲ್ಯ ಮತ್ತು ಮಮತೆ, ಗಂಡ-ಹೆಂಡಿರ ಸರಸ-ಸಲ್ಲಾಪದಂತಹ ಪ್ರಸಂಗಗಳನ್ನು ಹಾಡಿನ ಮೂಲಕ ಮಾನವೀಯ ಸಂಬಂಧಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ಅರಿತುಕೊಂಡು ನಾವೆಲ್ಲರೂ ಯುವ ಜನಾಂಗವು ಬದುಕಿನಲ್ಲಿ ಅನುಸರಣೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ. ನಮ್ಮ ಸಂಪ್ರದಾಯದ ಮೌಲ್ಯವನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಜನಪದ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ದೇವಸ್ಥಾನದ ಉಪಾಧ್ಯಕ್ಷೆ ಶಕುಂತಲಾ ಅಂಕಲಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯ ನಾಗೇಂದ್ರ ಯಾದವ, ಶಕುಂತಲಾ ಅಂಕಲಗಿ, ಮಂಜುಳಾ ನಿಂಬಾಳಕರ, ಪಿ.ಡಿ.ಓ. ಕುಮುದಿನಿ ಹಂಗರಗಿ, ಭರಮಣ್ಣ ಕಡಕೋಳ, ಸಿದ್ದಲಿಂಗಮ್ಮ ಓತಿಹಾಳ ಇನ್ನಿತರರು ವೇದಿಕೆಯ ಮೇಲಿದ್ದರು.
ದೇವಸ್ಥಾನಕ್ಕೆ ದೇಣಿಗೆ ನೀಡಿದ ಮಹಾದಾನಿಗಳಿಗೆ ಸನ್ಮಾನಿಸಲಾಯಿತು. ಸಾವಿತ್ರಿ ಹಿರೇಮಠ ಪ್ರಾರ್ಥಿಸಿದರು. ಗುರುಬಸಯ್ಯ ಹಿರೇಮಠ ನಿರೂಪಿಸಿದರು. ಶೋಭಾ ಚವ್ಹಾಣ ವಂದಿಸಿದರು. ನವರಸಪುರದ ವಿವಿಧ ಬಡಾವಣೆಗಳ ಸುಮಂಗಲೆಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.