ಚಿಕ್ಕೋಡಿ 11: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಅಬ್ಬರವಾಗಿ ಸುರಿಯುತ್ತಿರುವ ಪರಿಣಾಮ ಗಡಿ ಭಾಗದ ನದಿಗಳು ಉಕ್ಕಿ ಹರಿಯುತ್ತವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಯತಾಸ್ಥಿತಿ ಕಾಯ್ದುಕೊಂಡರೆ ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಎರಡು ಅಡಿಯಷ್ಟು ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಚಿಕ್ಕೋಡಿ ತಾಲೂಕಿನಲ್ಲಿ ನಾಲ್ಕು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿದೆ.
ಕಳೆದ ಒಂದು ವಾರದಿಂದ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಗಡಿ ಭಾಗದಲ್ಲಿಯೂ ಸಹ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಅದರಂತೆ ಮಹಾರಾಷ್ಟ್ರದ ನರಸಿಂಹವಾಡಿ ಹತ್ತಿರ ಹರಿಯುವ ಪಂಚಗಂಗಾ ನದಿ ನೀರಿನ ಮಟ್ಟದಲ್ಲಿಯೂ ಸಹ ಗಣನೀಯ ಏರಿಕೆ ಕಂಡಿದೆ. ಪಂಚಗಂಗಾ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಹೀಗಾಗಿ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಮಹಾರಾಷ್ಟ್ರದಿಂದ ಜಲಾನಯನ ಪ್ರದೇಶಗಳಾದ ರಾಧಾನಗರಿ, ಪಾಟಗಾಂವ, ಕಾಳಮ್ಮವಾಡಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ದೂಧಗಂಗಾ ಮತ್ತು ವೇಧಗಂಗಾ ನದಿಗಳು ಉಕ್ಕಿ ಹರಿಯುತ್ತ್ತಿವೆ.
ನಾಲ್ಕು ಸೇತುವೆಗಳು ಜಲಾವೃತ:
ನಾಲ್ಕು ಸೇತುವೆಗಳು ಜಲಾವೃತ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಾಗಿರುವದರಿಂದ ಕಲ್ಲೋಳ-ಯಡೂರ ಸೇತುವೆ ಜಲಾವೃತಗೊಂಡಿದೆ. ದೂಧಗಂಗಾ ನದಿಗೆ ಅಡ್ಡಲಾಗಿ ನಿಮರ್ಿಸಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇಧಗಂಗಾ ನದಿಗೆ ಅಡ್ಡಲಾಗಿ ನಿಮರ್ಿಸಿರುವ ಬೋಜವಾಡಿ-ಕುನ್ನೂರ ಸೇತುವೆ ಮುಳುಗಡೆಯಾಗಿವೆ. ಇದೇ ರೀತಿ ರಾಧಾನಗರಿ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿದ್ದರೆ ಚಿಕ್ಕೋಡಿ ತಾಲೂಕಿನ ಮತ್ತೆ ಎರಡು ಸೇತುವೆ ಮುಳುಗುವ ಸಾಧ್ಯತೆ ಇದೆ.
ಈಗಾಗಲೇ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ರಾಜ್ಯಕ್ಕೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಇತ್ತ ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮೂಲಕ 16500 ಕ್ಯೂಸೆಕ್ ನೀರು ಹರಿದು ಬರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 71 ಸಾವಿರ ಕ್ಯೂಸೆಕ ನೀರು ಹರಿದು ಬರುತ್ತಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 6 ಗೇಟಗಳ ಪೈಕಿ 53300 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ ಎಂದು ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಮಾಹಿತಿ ನೀಡಿದರು.
ಮಳೆ ಪ್ರಮಾಣ: ಕೋಯ್ನಾ-86 ಮಿಮೀ, ವಾರಣಾ-33 ಮಿಮೀ, ಕಾಳಮ್ಮವಾಡಿ- 67 ಮಿಮೀ, ನವಜಾ-79, ಸಾಂಗ್ಲೀ-01 ಮಿಮೀ, ರಾಧಾನಗರಿ-80 ಮಿಮೀ, ಪಾಟಗಾಂವ-172 ಮಿಮೀ, ಮಹಾಬಲೇಶ್ವರ-110ಮಿಮೀ, ಕೊಲ್ಲಾಪೂರ-10 ಮಿಮೀ, ಈ ರೀತಿ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-4.4 ಮಿಮೀ, ಅಂಕಲಿ-4.6 ಮಿಮೀ, ನಾಗರಮುನ್ನೋಳ್ಳಿ-5.4 ಮಿಮೀ, ಸದಲಗಾ-9.2 ಮಿಮೀ, ಗಳತಗಾ-6.2 ಮಿಮೀ, ಜೋಡಟ್ಟಿ-6.4 ಮಿಮೀ, ನಿಪ್ಪಾಣಿ ಪಿಡಬ್ಲುಡಿ-7.2 ಮಿಮೀ, ನಿಪ್ಪಾಣಿ ಎಆರ್ಎಸ್-5.4 ಮಿಮೀ, ಸೌಂದಲಗಾ-9.1 ಮಿಮೀ ಈ ರೀತಿಯಾಗಿ ಮಳೆಯಾಗಿದೆ.