ವಿಶ್ವಕರ್ಮ ಜಗತ್ತು ಕಂಡ ಮಹಾನ್ ಶಿಲ್ಪಿ: ಸಂಸದ ಈ.ತುಕಾರಾಮ್
Festive Vishwakarma Jayanti celebrations in Bellary
ಬಳ್ಳಾರಿಯಲ್ಲಿ ಸಂಭ್ರಮದ ವಿಶ್ವಕರ್ಮ ಜಯಂತಿ ಆಚರಣೆ
ಬಳ್ಳಾರಿ 17: ವಿಶ್ವಕರ್ಮರು ಜಗತ್ತು ಕಂಡ ಮಹಾನ್ ವಾಸ್ತುಶಿಲ್ಪಿ ಮತ್ತು ವಿನ್ಯಾಸಕರಾಗಿದ್ದಾರೆ. ಅವರ ಜೀವನದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಸಂಸದ ಈ.ತುಕಾರಾಮ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರಿ್ಡಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮರ ಸತ್ಯ ಧರ್ಮವನ್ನು ಎಲ್ಲಾ ಜನಾಂಗದವರು ಪರಿಪಾಲನೆ ಮಾಡಬೇಕು. ಅವರ ಗ್ರಂಥಗಳ ಬಗ್ಗೆ ಅಧ್ಯಯನ ಮಾಡಿ, ಅವರ ಜೀವನ ಶೈಲಿ ತತ್ವಗಳನ್ನು ಪಾಲಿಸೋಣ ಎಂದು ತಿಳಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ವಿದ್ಯೆಯ ಮಹತ್ವ ತಿಳಿದು ಶೈಕ್ಷಣಿಕವಾಗಿ ಪ್ರಜ್ಞಾವಂತರಾಗಬೇಕು. ಸಂವಿಧಾನವು ನಮಗೆ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದ್ದು, ಅದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ತಂದೆ-ತಾಯಿ ಜನ್ಮ ನೀಡಿದರೆ, ಗುರುಗಳು ಭವಿಷ್ಯ ನೀಡುತ್ತಾರೆ. ಅಂತಹ ಗುರುಗಳಿಗೆ ಯಾವಾಗಲೂ ನಾವು ಋಣಿಯಾಗಿರಬೇಕು ಎಂದು ಹೇಳುತ್ತಾ ತಮ್ಮ ಪದವಿ ಕಾಲೇಜಿನ ವಿದ್ಯಾಭ್ಯಾಸ ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡರು.
ಬಳ್ಳಾರಿ ನಗರದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿನಿಲಯಕ್ಕೆ ಅನುದಾನವಾಗಿ 50 ಲಕ್ಷ ನೀಡಲಾಗುವುದು ಎಂದು ತಿಳಿಸಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ 12 ಕೋಟಿ ವೆಚ್ಚದಲ್ಲಿ ಎಮ್‌ಆರ್‌ಐ ಸ್ಕ್ಯಾನಿಂಗ್ ಹಾಗೂ ಇಎಸ್‌ಐ ಆಸ್ಪತ್ರೆಗೆ ಶಂಕುಸ್ಥಾಪನೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಜವಾಹರ್ ನವೋದಯ ವಿದ್ಯಾಲಯ ಸ್ಥಾಪಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ನಗರದಲ್ಲಿ ಈಗಾಗಲೇ ಹಲವಾರು ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ವಿಶ್ವಕರ್ಮರು ಅರಮನೆಗಳಿಂದ ಹಿಡಿದು ದೇವರ ಆಯುಧಗಳು, ದೇವತೆಗಳಿಗೆ ಹಾರುವ ರಥಗಳವರೆಗೆ ಎಲ್ಲವನ್ನು ಸೃಷ್ಟಿಸಿದ ವಿನ್ಯಾಸಕರಾಗಿದ್ದಾರೆ. ವಿಶ್ವಕರ್ಮ ಜನಾಂಗದವರು ಕರ್ಮ ಸಿದ್ಧಾಂತ ಮತ್ತು ದುಡಿಮೆ ನಂಬಿ ಬದುಕುವ ಜನರಾಗಿದ್ದು, ಸಮಾಜ ಸೇವೆ ಮಾಡುವ ಸಹೃದಯ ಜನಾಂಗವಾಗಿದೆ ಎಂದು ಹೇಳಿದರು.
ಕೂಡ್ಲಿಗಿ ತಾಲ್ಲೂಕಿನ ಖಾನಹೊಸಹಳ್ಳಿಯ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ.ವೃಷಭೇಂದ್ರಚಾರ್ಯ ಅರ್ಕಸಾಲಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ವಿಶ್ವಕರ್ಮರು ಪುರಾಣಗಳ ಪ್ರಕಾರ, ಒಬ್ಬ ಅಪ್ರತಿಮ ವಾಸ್ತುಶಿಲ್ಪ, ತಂತ್ರಜ್ಞಾನದ ಹಿಂದೂ ದೇವರು. ವೇದ ಉಪನಿಷತ್ತುಗಳಲ್ಲಿ ಕೊಂಡಾಡಿರುವ ಭಗವಂತ ವಿಶ್ವಕರ್ಮ ಅವರು ವಿಶ್ವದ ಪ್ರಖ್ಯಾತ ಶಿಲ್ಪಿಗಳು. ಹಲವಾರು ಕವಿಗಳು, ಸಾಹಿತಿಗಳು ಸಂಶೋಧನೆ ನಡೆಸಿ ವಿಶ್ವಕರ್ಮ ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ವಿಶ್ವಕರ್ಮ ಅವರ ಬಗ್ಗೆ ಚರಿತ್ರೆ, ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.
ನಮ್ಮ ಭಾರತದಲ್ಲಿಯು ವಿಶ್ವಕರ್ಮರಿಂದ ಸ್ಥಾಪಿಸಿಲ್ಪಟ್ಟ ಕೆಲವು ಅದ್ಭುತ ಸ್ಥಳಗಳಿವೆ. 5 ಸಾವಿರ ವರ್ಷಗಳ ಚರಿತ್ರೆ ಹಿನ್ನೆಲೆಯನ್ನು ಹೊಂದಿದ ಜನಾಂಗ ವಿಶ್ವಕರ್ಮ ಜನಾಂಗವಾಗಿದೆ. ಹಲವಾರು ಪ್ರಾಚೀನ ಕಾಲದ ಶಿಲೆಗಳು, ಆಯುಧಗಳು ವಿಶ್ವಕರ್ಮರವರು ರಚಿಸಿದ್ದಾರೆ ಎಂಬ ಉಲ್ಲೇಖಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನದ ಪ್ರಸ್ತಾವನೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ತೋರಣಗಲ್ ನ ಕೆ.ಕೊಟ್ರೇಶ್ ತಂಡದಿಂದ ಭಕ್ತಿ ಸಂಗೀತ ವಚನ ಗಾಯನ ಪ್ರಸ್ತುತ ಪಡಿಸಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ಚಂದ್ರಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ್ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ಸ.ಸೋನಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಇಲಾಖೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
*ಸಂಭ್ರಮದ ಮೆರವಣಿಗೆ:*
ವಿಶ್ವಕರ್ಮ ಜಯಂತಿಯ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡು ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕೋಲಾಟ ಪ್ರದರ್ಶನ ನೀಡಿದರು.
ಮೆರವಣಿಗೆಯು ನಗರದ ಕಾಳಿಕಾ ಕಮಠೇಶ್ವರ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 