ಕಂಪ್ಲಿ 17: ಖರೀದಿ ಕೇಂದ್ರಕ್ಕೆ ರೈತರು ಗುಣಮಟ್ಟದ ಭತ್ತ ಮತ್ತು ಜೋಳ ನೀಡುವ ಮೂಲಕ ಬೆಂಬಲ ಬೆಲೆ ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು. ಪಟ್ಟಣದ ಬೆಳಗೋಡ್‌ಹಾಳ್ ರಸ್ತೆಯಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಗೋದಾಮಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭತ್ತ, ಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಬಿಸಿಲು, ಮಳೆ, ಚಳಿ ಎನ್ನದೇ, ರೈತರು ಬೆಳೆಗಳನ್ನು ಬೆಳೆದು, ಬೆಂಬಲ ಬೆಲೆ ದೊರಕದಿದ್ದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಈಗಾಗಲೇ ಸಾಕಷ್ಟು ರೈತರು ತಮ್ಮ ಫಸಲುಗಳನ್ನು ಇಟ್ಟುಕೊಳ್ಳದೇ, ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.
ಆದ್ದರಿಂದ ಸರ್ಕಾರವು ಶಾಶ್ವತವಾಗಿ ಖರೀದಿ ಕೇಂದ್ರ ಆರಂಭಿಸಿದರೆ, ರೈತರಿಗೆ ಸಕಾಲದಲ್ಲಿ ವೈಜ್ಞಾನಿಕ ಬೆಲೆ ದೊರಕಲಿದೆ. ರೈತರು ಇಲ್ಲಿನ ಬೆಂಬಲ ಬೆಲೆಯ ಸದುಪಯೋಗಪಡೆದುಕೊಳ್ಳಬೇಕು ಎಂದರು. ನಂತರ ಕೃಷಿ ಅಧಿಕಾರಿ ನವ್ಯ ಮಾತನಾಡಿ, ಕಂಪ್ಲಿ ಭಾಗದ ರೈತರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಖರೀದಿ ಕೇಂದ್ರ ಆರಂಭಿಸಿದೆ. ರೈತರು ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿ, ಬೆಂಬಲ ಬೆಲೆ ಪಡೆಯಬೇಕು. ರೈತರು ಖುದ್ದಾಗಿ ಕೇಂದ್ರಕ್ಕೆ ಭೇಟಿ ನೀಡಿ, ನೋಂದಣಿ ಮಾಡಿ, ಬೆಂಬಲ ಬೆಲೆ ಯೋಜನೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್‌ರೆಡ್ಡಿ, ಉಪಾಧ್ಯಕ್ಷೆ ಟಿ.ಸಾವಿತ್ರಮ್ಮ, ನಿರ್ದೇಶಕರಾದ ಪ್ರಭುಸ್ವಾಮಿ, ಜಂಭಣ್ಣ, ಗುಬಾಜಿ ಮಂಜುನಾಥ, ಆಂಜನೇಯಲು, ರಮೇಶ, ಮಾರೇಶ, ಲಿಂಗಪ್ಪ, ವಿರುಪಾಕ್ಷಪ್ಪ, ಕರ್ನಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತ ಮುಖಂ ಹೂವಣ್ಣ, ಆಹಾರ ನೀರೀಕ್ಷಕ ವಿರುಪಾಕ್ಷಗೌಡ, ಮುಖ್ಯಕಾರ್ಯನಿರ್ವಾಹಕ ಕರೇಕಲ್ ವಿರೇಶ, ಸಿಬ್ಬಂದಿಗಳಾದ ಕರಿಬಸುವ, ಬಿಂಗಿ ಶ್ರೀನಿವಾಸ, ಸಿದ್ದೇಶ ಹಳ್ಳಿ, ಉಮೇಶ ಸೇರಿ ರೈತರಿದ್ದರು.