ರೈತರು ಸರ್ಕಾರದ ಸಬ್ಸಿಡಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ: ಹಲಗೇರಿ

ಕೊಪ್ಪಳ 05: ದೇಶದ ಬೆನ್ನೆಲುಬಾಗಿರುವ ರೈತರಿಗೆ ರಾಜ್ಯ ಸರ್ಕಾರ ಆಯಾ ಜಿಲ್ಲಾ ತೋಟಗಾರಿಕೆ ಇಲಾಖೆಗಳ ವತಿಯಿಂದ ನೀಡುತ್ತಿರುವ ವಿವಿಧ ರೀತಿಯ ಸಬ್ಸಿಡಿಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗೂಳಪ್ಪ ಹಲಗೇರಿ ಹೇಳಿದರು.

ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಕ್ಷೇತ್ರ, ಗಿಣಿಗೇರಾದಲ್ಲಿ ಇಂದು (ಫೆ.05) ಆಯೋಜಿಸಲಾಗಿದ್ದ ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳ ಕ್ಷೇತ್ರೋತ್ಸವ ಮತ್ತು ತಾಂತ್ರಿಕ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ತೋಟಗಾರಿಕೆ ಇಲಾಖೆ ಜಿಲ್ಲೆಯ ರೈತರಿಗೆ ಕಲ್ಲಂಗಡಿ ಬೆಳೆಯುವಲ್ಲಿ ನೀಡಿದ ಸಹಕಾರ, ಮಾರ್ಗದರ್ಶನದಿಂದಲೇ ರಾಜ್ಯದಲ್ಲಿ ಅತಿಹೆಚ್ಚು ಕಲ್ಲಂಗಡಿ ಬೆಳೆಯುವ ಜಿಲ್ಲೆಯಾಗಿ ಕೊಪ್ಪಳ ಹೊರಹೊಮ್ಮಿದೆ. ರೈತರು ಕಲ್ಲಂಗಡಿ ಬೆಳೆಯ ಕುರಿತು ಮಾಹಿತಿ ಬೇಕಾದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಉಕ್ಕುಂದ ಪ್ರಾಸ್ತವಿಕವಾಗಿ ಮಾತನಾಡಿ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳ ಕ್ಷೇತ್ರೋತ್ಸವದಲ್ಲಿ 12 ರೀತಿಯ ಕಲ್ಲಂಗಡಿ ತಳಿ ಹಾಗೂ 5 ರೀತಿಯ ಕರಬೂಜ ತಳಿಯನ್ನು ಕಾರ್ಯಾಗಾರದಲ್ಲಿ ಇಡಲಾಗಿದೆ. ಕಾಯರ್ಾಗಾರದ ಮುಖ್ಯ ಉದ್ದೇಶ ಕಲ್ಲಂಗಡಿ ಬೆಳೆಯುವ ಪರಿಯನ್ನು ರೈತರಿಗೆ ತಿಳಿಸುವುದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೆಂಪು ಬಣ್ಣದ ಕಲ್ಲಂಗಡಿ ಸಿಗುವುದು ಸಾಮಾನ್ಯ. ಆದರೆ ಹಳದಿ ಬಣ್ಣದ ಕಲ್ಲಂಗಡಿಯನ್ನು ಕಂಡು ಆ ಹಣ್ಣಿಗೆ ಸಿರಂಜಿನಿಂದ ಬಣ್ಣ ತುಂಬಲಾಗಿದೆ ಎಂಬ ವದಂತಿಗಳು ಮಾರುಕಟ್ಟೆಯಲ್ಲಿ ಹರಡುತ್ತಿರುವುದು ಬೇಸರದ ಸಂಗತಿಯಾಗಿದೆ. ನೈಸರ್ಗಿಕವಾಗಿ ಹಳದಿ ಬಣ್ಣದ ಕಲ್ಲಂಗಡಿಯನ್ನು ಬೆಳೆಯಲಾಗಿದೆ. ಇವು ಮಾರುಕಟ್ಟೆಯಲ್ಲಿಯೂ ಲಭ್ಯ ಇವೆ. ಆದ್ದರಿಂದ ಗ್ರಾಹಕರು ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ ಎಂದರು.

ವಿವಿಧ ರೀತಿಯ ಕಲ್ಲಂಗಡಿ ತಳಿಗಳ ಪ್ರದರ್ಶನ: ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ರೀತಿಯ ತಳಿಗಳಾದ ಸರಸ್ವತಿ ತಳಿ ಕಲ್ಲಂಗಡಿ 3 ರಿಂದ 4 ಕೆಜಿ, ಕಿರಣ 3 ರಿಂದ 4, ಕಿರಣ-2 3 ರಿಂದ 4, ಅನ್ಮೋಲ 3 ರಿಂದ 4, ವಸುಧಾ 7 ರಿಂದ 9, ವಿಶಾಲಾ 3 ರಿಂದ 4, ಜನ್ನತ್ 3 ರಿಂದ 4, ಆರೋಹಿ 3 ರಿಂದ 4, ಭೀಮ್, ಮಧುಶ್ರೀ ತಳಿಗಳು ಇದ್ದವು. ಇವೆಲ್ಲವೂ ಅಂದಾಜು ಎಕರೆಗೆ 15 ರಿಂದ 25 ಟನ್ನಿನವರೆಗೆ ಬೆಳೆಯಬಹುದು. ಬಿಂದು ಮಾತ್ರ 20 ರಿಂದ 30ಕ್ಕೆ ಬರುತ್ತದೆ. ಇವುಗಳು 70 ರಿಂದ 80 ದಿನಗಳಲ್ಲಿ ಬೆಳೆ ಫಸಲಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ 1 ಕೆಜಿ ಹಣ್ಣಿಗೆ 10 ರಿಂದ 20 ರೂ ಬೆಲೆಯನ್ನು ಹೊಂದಿರುತ್ತವೆ. ಇಲ್ಲಿನ ಮತ್ತೊಂದು ವಿಶೇಷತೆ ಅಂದರೆ ರಾತ್ರಿ ಸಮಯದಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ನೊಣ, ಸೊಳ್ಳೆಗಳು ಬರದಂತೆ ಸೋಲಾರ್ ಸ್ಟ್ಯಾಂಡನ್ನು ಇಡಲಾಗಿದೆ.

ಕರಬೂಜ ಕಮಾಲ್: ಕರಬೂಜ ತಳಿಗಳಲ್ಲಿ ಮಧುಮತಿ, ಮೃದುಲಾ, ಮಾಧುರಿ, ಸಾನ್ವಿ, ಮುಸ್ಕಾನ್ ಮತ್ತು ಸ್ವಾತಿ ಎಂಬ 6 ತಳಿಯ ಹಣ್ಣುಗಳು ಕಾರ್ಯಗಾರದಲ್ಲಿ ಕಂಗೊಳಿಸಿದವು. 

ಕಾರ್ಯಕ್ರಮದಲ್ಲಿ ಸರ್ಮೋದಯ ಗ್ರಾಮೀಣ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ದೇಸಾಯಿ, ಪ್ರಗತಿಪರ ರೈತರಾದ ಬಸವನಗೌಡ್ರ ಗದಗ, ಗೋವಿಂದರಾಜ ಕಾರಟಗಿ, ಮಲ್ಲಣ್ಣ ಗಡಗಿ ತಳಕಲ್ ಸೇರಿದಂತೆ ಜಿಲ್ಲೆಯ 6 ತಾಲೂಕಿನ ರೈತರು ಉಪಸ್ಥಿತರಿದ್ದರು. ವಾಮನಮೂರ್ತಿ  ಪ್ರಾರ್ಥಿಸಿದರು.