ಬೆಂಗಳೂರು, ಏ.28,ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ರೈತರು ತರುತ್ತಿರುವ ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್ಕಗಳಿಂದ ವಿನಾಯಿತಿ ನೀಡಬೇಕು ಸೇರಿದಂತೆ ರಾಜ್ಯದ ರೈತರು, ಕೃಷಿ ಕೂಲಿಕಾರರು ಮತ್ತು ಗ್ರಾಮೀಣಾ ಕಸುಬುದಾರರ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ಕೊರೊನಾ ರೋಗದ ಆಕ್ರಮಣದಿಂದ ನಮ್ಮ ಆರ್ಥಿಕತೆಯ ಭಾಗವಾಗಿ ಗ್ರಾಮೀಣಾ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಇದನ್ನು ಪುನರ್ ಚೇತನಗೊಳಿಸಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ. ಈ ಸಾಲಿನ ಮುಂಗಾರು ಉತ್ತಮವಾಗಿರಲಿದೆಯೆಂಬ ವರದಿಗಳು ಬರುತ್ತಿವೆ. ಆದರೆ ಕೃಷಿಯನ್ನೇ ನಂಬಿ ಬದುಕನ್ನು ಸಾಗಿಸುವ ರೈತರು, ಕೃಷಿ ಕೂಲಿಕಾರರು ಹಾಗು ಗ್ರಾಮೀಣಾ ಕಸುಬುದಾರರು ತುಂಬಾ ಚಿಂತಾಕ್ರಾಂತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಇರುವ ಬೆಳೆ ಮಾರಾಟವಾಗದೇ ರೈತರ ಸಾಲದ ಹೊರೆ ಹೆಚ್ಚಾಗುತ್ತಿದೆ. ಕೂಲಿಕಾರರಿಗೆ ಕೆಲಸವಿಲ್ಲ. ಇದರ ಫಲವಾಗಿ ಕಸುಬುದಾರನೂ ಅನಾಥ. ಗ್ರಾಮೀಣ ಪ್ರದೇಶದ ದೊಡ್ಡ ಸಂಖ್ಯೆಯ ಕುಟುಂಬಗಳು, ನಗರಗಳಲ್ಲಿ ತಮ್ಮ ಕುಟುಂಬದ ಸದಸ್ಯರು ಸಂಪಾದನೆ ಮಾಡುವ ಕೂಲಿ ಇಲ್ಲವೇ ಸಂಬಳಗಳಿಂದ ಬರುವ ಅದಾಯವನ್ನೇ ನೆಚ್ಚಿ ಜೀವನ ಮಾಡುವವರು ಇದ್ದಾರೆ. ಈಗ ನಗರದಿಂದ ಬರುವ ಅದಾಯವೂ ಇಲ್ಲ, ಕೂಲಿಯ ಕೆಲಸವೂ ಇಲ್ಲ, ಸಾಲದ ಹೊರೆ ಹೆಚ್ಚಳವಾಗಿ, ಮುಂದಿನ ಜೀವನ ಹೇಗೆ ಎಂಬುದೇ ಬೃಹತ್ ಸಮಸ್ಯೆಯಾಗಿ ಗ್ರಾಮೀಣಾ ಜನತೆಯನ್ನು ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಿಂದೆಂದೂ ಕಂಡರಿಯದ ಇಂತಹ ಸನ್ನಿವೇಶದಲ್ಲಿ ಕೃಷಿಯಲ್ಲಿ ತೊಡಗಿರುವ ರೈತರು, ಕೃಷಿ ಕೂಲಿಕಾರರು ಹಾಗು ಗ್ರಾಮೀಣಾ ಕಸುಬುದಾರರ ನೆರವಿಗೆ ಧಾವಿಸಬೇಕಿರುವುದು ಯಾವುದೇ ನಾಗರೀಕ ಸರ್ಕಾರಗಳ ಅದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಈಡೇರಿಸಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಬಡತನ, ನಿರುದ್ಯೋಗ, ಹಸಿವು ತಾಂಡವಾಡುತ್ತಿರುವ ಈ ಸಂದರ್ಭದಲ್ಲಿಯಾದರೂ ಯಥೇಚ್ಚವಾಗಿ ಗೋದಾಮುಗಳಲ್ಲಿ ಇರುವ ಆಹಾರ ಪದಾರ್ಥಗಳನ್ನು ಬಿ.ಪಿ.ಎಲ್., ಎ.ಪಿ.ಎಲ್. ಎನ್ನುವ ತಾರತಮ್ಯವಿಲ್ಲದೆ ಕನಿಷ್ಠ ಒಂದು ವರ್ಷ ಮಾಸಿಕ ಪ್ರತಿ ಕುಟುಂಬಕ್ಕೆ 15 ಕೆ.ಜಿ. ರೇಷನ್‌ನ್ನು ನೀಡಬೇಕು. ಅಕ್ಕಿಯ ಜೊತೆಗೆ ಬೆಳೆ, ಎಣ್ಣೆ, ಸಕ್ಕರೆ, ಉಪ್ಪು ಇತ್ಯಾದಿ ಸಾಮಾಗ್ರಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಯ ಜೊತೆಗೆ ಹಿಂದಿನ ರಾಜ್ಯ ಸರ್ಕಾರಗಳ ರೀತಿಯಲ್ಲಿ ಹೆಚ್ಚಿನ ಪ್ರೋತ್ಸಹ ದನವನ್ನು ನೀಡಿ ಭತ್ತ, ಇತ್ಯಾದಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಅಗತ್ಯವಿರುವ ಕಡೆ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳಿಗೆ ಟೋಲ್ ಪ್ರೀ, ಉಚಿತ ಸಾಗಣಿಕೆ ವೆಚ್ಚ ಹಾಗೂ ಮಾರುಕಟ್ಟೆ ಶುಲ್ಕಕ್ಕೆ ವಿನಾಯಿತಿ ನೀಡಬೇಕು. ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ರೈತರು ತರುತ್ತಿರುವ ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್ಕಗಳಿಂದ ವಿನಾಯಿತಿ ನೀಡಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬೆಲೆ ಕುಸಿತದಿಂದ ದಿಕ್ಕೆಟ್ಟಿರುವ ರೈತನ ಮಾರುಕಟ್ಟೆಯ ಸಾಗಾಣಿಕೆ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಎಲ್ಲಾ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣಾ ಕಸುಬುದಾರರ ಕುಟುಂಬಗಳಿಗೆ ಕನಿಷ್ಟ 10000 ರೂ. ನೆರವು ನೀಡಬೇಕು. ಸಂಕಷ್ಟದಲ್ಲಿರುವ ರೈತ, ತನ್ನ ಮುಂದಿನ ಕೃಷಿಯನ್ನು ನಡೆಸಲು ಸಹಾಯವಾಗಲು ಪ್ರತಿ ಕುಟುಂಬಕ್ಕೆ ಕನಿಷ್ಠ 10000 ರೂ. ಗಳನ್ನು ನೆರವು ನೀಡಬೇಕು. ಇದೇ ರೀತಿಯಲ್ಲಿ ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರಿಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೃಷಿ ಕೂಲಿಕಾರರಿಗೆ ಹೆಚ್ಚು ಹೆಚ್ಚು ಕೂಲಿ ದಿನಗಳು ಸಿಗುವ ರೀತಿಯ ಕಾಮಗಾರಿಗಳನ್ನು, ಕೃಷಿ ಕೆಲಸಗಳನ್ನು ಯೋಜನೆಯ ವ್ಯಾಪ್ತಿಗೆ ಸರ‍್ಪಡೆ ಮಾಡಬೇಕು. ದಿನಗಳ ಗರಿಷ್ಠ ಮಿತಿಯನ್ನು ತೆಗೆಯಬೇಕು ಹಾಗು ಕೂಲಿಯನ್ನು 700 ರೂ. ಗೆ ಏರಿಸಬೇಕು. ಬಾಕಿ ಇರುವ ಕೂಲಿಯ ಹಣವನ್ನು ಕೂಡಲೆ ಪಾವತಿ ಮಾಡಬೇಕು. `ರಾಜ್ಯ ಮಟ್ಟದ ಬ್ಯಾಂಕ್ಸ್ ಸಮಿತಿ’ಯ ಸಭೆಯನ್ನು ಕೂಡಲೇ ಕರೆದು, ಈ ಸಾಲಿನಲ್ಲಿ ಕೃಷಿಗೆ ನೀಡುವ ಸಾಲದ ಮೊತ್ತವನ್ನು ದುಪಟ್ಟು ಮಾಡಬೇಕು. ಅಲ್ಲದೆ ಸಾಲ ಪಡೆಯುವವರ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು. ಈ ಹೊಸ ಸಾಲಗಳು ವಿಶೇಷವಾಗಿ ಸಣ್ಣ, ಅತಿಸಣ್ಣ ರೈತರು ಮತ್ತು ಕೃಷಿ ಕೂಲಿಕಾರರಿಗೆ ಹೆಚ್ಚು ಸಿಗುವಂತೆ ಕ್ರಮ ವಹಿಸಬೇಕು. ಇನ್ನೂ ಮುಖ್ಯವಾಗಿ ಸಹಕಾರಿ ಕ್ಷೇತ್ರದಲ್ಲಿ ಇರುವಂತೆ 3 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲಗಳನ್ನು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ನೀಡಲು ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಘೋಷಣೆ ಮಾಡಬೇಕು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲದ ಪಾವತಿಗೆ ಸಂಬಂಧಿಸಿ ನೀಡಿರುವ ಕಾಲಾವಧಿಯನ್ನು ವಿಸ್ತರಿಸಬೇಕು ಹಾಗೂ ಈ ಕಾಲಾವಧಿಯ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸುವಂತೆ ಒತ್ತಾಯ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂಕಷ್ಟದಲ್ಲಿರುವ ಕೃಷಿಕರಿಗೆ ಸಹಾಯ ಮಾಡುವ ಹಾಗು ಸಕಾಲಕ್ಕೆ ರಸಗೊಬ್ಬರ, ಕೀಟನಾಶಕಗಳು ಸರಬರಾಜು ಮಾಡುವ ಉದ್ದೇಶದಿಂದ ಮುಂಗಾರಿಗೆ ಮುಂಚಿತವಾಗಿಯೇ ಗ್ರಾಮೀಣ ಪ್ರದೇಶಗಳ ರೇಷನ್ ಅಂಗಡಿ, ಹಾಲು ಉತ್ಪಾದಕರ ಸಂಘಗಳು ಮತ್ತಿತರೆ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟದ ವ್ಯವಸ್ಥೆನ್ನು ಮಾಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.