ಖ್ಯಾತ ಪೀಟೀಲು ವಾದಕ ಪಂ.ಶಂಕರ ಕಬಾಡಿ

ತಂತಿಗಳ ಮೇಲೆ ಅವರು ಬೆರಳುಗಳನ್ನು ಆಡಿಸಿದರೆ ಮಾಧುರ್ಯ ತಂಬಿಕೊಂಡು ಬರುತ್ತದೆ. ಅವರು ಪೀಟೀಲು ನುಡಿಸುತ್ತಿದ್ದರೆ ಸಂಗೀತ ತಿಳಿಯದ ಸಾಮಾನ್ಯರೂ ಕೂಡ ತಿಳಿದಂತೆ ತಲೆಯಾಡಿಸುತ್ತಾರೆ. ತಂತಿಗಳ ಮೇಲಿನ ಬೆರಳುಗಳ ನಡಿಗೆ ಶೋತೃಗಳ ಹೃದಯದಲ್ಲಿ ಕಂಪನ ಹುಟ್ಟಿಸುತ್ತವೆ. ವಿದ್ವಾಂಸರಾದ ಪಂ.ಶಂಕರ ಟಿ.ಕಬಾಡಿಯವರು ತಮ್ಮ ವೈಶಿಷ್ಟ ಸಂಗೀತ ಜ್ಞಾನದಿಂದ ನಾಡಿನ ಅತ್ಯುನ್ನತ ಸ್ಥಾನದಲ್ಲಿರುವ ಪೀಟೀಲು ವಾದಕರು. ಪ್ರಸಿದ್ಧ ಗಾಯಕರ ಹಾಡುಗಾರಿಕೆಗೆ ತಮ್ಮ ಪೀಟೀಲು ಮೂಲಕ ತಕ್ಕ ಉತ್ತರ ಕೊಡಬಲ್ಲ ಪ್ರತಿಭಾವಂತರು.  

ಪಂ.ಶಂಕರ ಕಬಾಡಿಯವರು ಗದಗಿನಲ್ಲಿ 1964ರ ನವ್ಹೆಂಬರ್ 9ರಂದು ಜನಿಸಿದರು. ತಂದೆ ತುಕರಾಂ ಸಾ, ತಾಯಿ ಚಂದ್ರಭಾಗಾ. ಕಬಾಡಿಯವರದ್ದು ಸಂಗೀತಗಾರರ ಕುಟುಂಬ. ಅವರ ತಾತ ಪಂಡಿತ ವಿಠ್ಠಲ ಕಬಾಡಿಯವರು ಸುಪ್ರಸಿದ್ಧ ಹಾರ್ಮೋನಿಯಂ ವಾದಕರಾಗಿದ್ದರು. ಹಾಗೆಯೇ ತಂದೆ ತುಕರಾಂರವರು ಪ್ರಸಿದ್ಧ ಪೀಟೀಲು ಕಲಾವಿದರು. ಅವರ ಅಕ್ಕ ವಿದೂಷಿ ರೇಣುಕಾ ನಾಕೋಡರವರು ಶ್ರೇಷ್ಠ ಗಾಯಕರು, ಮಾವ ಪಂ.ರಘುನಾಥ ನಾಕೋಡರವರು ‘ಎ’ ಶ್ರೇಣಿಯ ತಬಲಾ ವಾದಕರು. ಅವರದು ಸಂಗೀತವನ್ನು ಆರಾಧಿಸುವ ಒಂದು ಕುಟುಂಬ. ಸಂಗೀತದ ವಾತಾವರಣದಲ್ಲಿ ಬೆಳೆದ ಶಂಕರ ಅವರು ತಂದೆಯವರ ಗರಡಿಯಲ್ಲಿ ಸಂಗೀತಾಭ್ಯಾಸ ಆರಂಭಿಸಿದರು. ಅವರು ಪ್ರಾಥಮಿಕ ಶಿಕ್ಷಣವನ್ನು ಸೊಂಡುರ ಮತ್ತು ಧಾರವಾಡದ ಬಾಸೆಲ್ ಮಿಸೆನ್ ಬಾಯ್ಸ್‌ ಸ್ಕೂಲಿನಲ್ಲಿ, ಪ್ರೌಢಶಿಕ್ಷಣವನ್ನು ಧಾರವಾಡದ ಆರ್‌.ಎಲ್‌.ಎಸ್ ಕಾಲೇಜಿನಲ್ಲಿ ಪೂರೈಸಿ, ಬಿ.ಎ ಸಂಗೀತ ಅಧ್ಯಯನಕ್ಕಾಗಿ ಕರ್ನಾಟಕ ಕಾಲೇಜಿಗೆ ಸೇರಿದರು. ಶಂಕರ ಅವರು ಬಿಎ ಮ್ಯೂಸಿಕ್ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಅಂಬಾಬಾಯಿ ಹಾನಗಲ್ ಸ್ವರ್ಣ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮ್ಯೂಸಿಕ್‌ನಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದರು. ಅಲ್ಲದೇ ಅಖಿಲಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಅಲಂಕಾರವನ್ನು ಉನ್ನತ ಶ್ರೇಣಿಯಲ್ಲಿ ಪಡೆದರು.  

1991ರಲ್ಲಿ ಗದಗಿನ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದಲ್ಲಿ ವಾಯಲಿನ್ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ಶಂಕರರು ಮೂರು ವರ್ಷಗಳವರೆಗೆ ಸೇವೆ ಸಲ್ಲಿಸಿದರು. ಕಾಲೇಜು ಅನುದಾನಗೊಳ್ಳದೇ ಇರುವುದರಿಂದ ಕಬಾಡಿಯವರು 1994ರಲ್ಲಿ ಸಾಂಗ್ಲಿ ಆಕಾಶವಾಣಿ ಕೇಂದ್ರಕ್ಕೆ ವಾಯಲಿನ್ ಕಲಾವಿದರಾಗಿ ಸೇರಿಕೊಂಡರು. ಅಲ್ಲಿ ಮೂರು ವರ್ಷಗಳಕಾಲ ಸೇವೆ ಸಲ್ಲಿಸಿದ ಅವರು 1996ರಲ್ಲಿ ವರ್ಗಾವಣೆ ಮಾಡಿಕೊಂಡು ವಿದ್ಯಾಕಾಶಿ ಧಾರವಾಡದ ಆಕಾಶವಾಣಿಗೆ ಬಂದರು. ಕಬಾಡಿಯವರುನುಡಿಸುವ ಶೈಲಿ ಬಹಳ ವೈಶಿಷ್ಟಪೂರ್ಣವಾಗಿದ್ದು, ಸಂಗೀತಲೋಕದಲ್ಲಿ ಅವರು ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ವಾಯಲಿನ್ ನುಡಿಸುವಾಗ ಮೊಗದಲ್ಲಿ ಸಾಹಿತ್ಯದ ಅಭಿವ್ಯಕ್ತವಾಗುತ್ತದೆ. ತಾವೇ ಸಿದ್ಧಪಡಿಸಿಕೊಂಡಿರುವ ಐದು ತಂತಿಗಳ ವಾಯಲಿನ್ ಅವರ ಪ್ರತಿಭೆಯ ಅಭಿವ್ಯಕ್ತಕ್ಕೆ ಕನ್ನಡಿಯಾಗಿದೆ. ಶಂಕರ ಕಬಾಡಿಯವರ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ಶಿಷ್ಯಂದಿರು ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ. ಬಿಡುವಿಲ್ಲದ ಸಂಗೀತ ಕಛೇರಿಗಳ ನಡುವೆ ವಿದ್ಯಾದಾನಕ್ಕಾಗಿ ಸಮಯ ಮಾಡಿಕೊಂಡು ವಿದ್ಯಾದಾನದಲ್ಲಿ ನಿರತರಾಗಿದ್ದಾರೆ.  

ಕಬಾಡಿಯವರ ಏಕವ್ಯಕ್ತಿ ಪೀಟೀಲು ಕಛೇರಿಗಳಲ್ಲಿ ಭಕ್ತಿ ಭಾವ ಝರಿಯಂತೆ ಹರಿಯುತ್ತದೆ. ಅವರು ಬೆಂಗಳೂರು, ಮೈಸೂರು, ಮುಂಬೈ, ಸಾಂಗ್ಲಿ, ನಾಗಪುರ, ಕಲ್ಬುರ್ಗಿ, ಗೋವಾ, ವಿಜಯಪುರ, ಮೀರಜ, ಹುಬ್ಬಳ್ಳಿ, ಹೊನ್ನಾವರ, ಬಳ್ಳಾರಿ ಮುಂತಾದೆಡೆ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಪಂ.ವೆಂಕಟೇಶಕುಮಾರ, ಪಂ.ಅರ್ಜುನಸಾ ನಾಕೋಡ, ಪಂ.ಪಂಚಾಕ್ಷರಿ ಸ್ವಾಮಿ ಮತಿಗಟ್ಟಿ, ಪಂ.ಚಂದ್ರಶೇಖರ ಪುರಾಣಿಕಮಠ, ಪಂ.ಗಣಪತಿ ಭಟ್, ಪಂ.ಕೈವಲ್ಯಕುಮಾರ ಗುರವ, ಪಂ.ನಾರಾಯಣ ಮಜುಂದಾರ, ಪಂ.ಬಾಲಚಂದ್ರ ನಾಕೋಡ, ವಿದುಷಿ ರೇಣುಕಾ ನಾಕೋಡ, ವಿದುಷಿ ಮಂಗಳ ಜೋಶಿ, ವಿದುಷಿ ಭಾರತಿ ವೈಶಂಪಾಯನ ಮುಂತಾದ ಅಸಂಖ್ಯಾತ ಪ್ರಸಿದ್ಧರ ಜೊತೆಗೆ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪಂಡಿತ ಶಂಕರ ಕಬಾಡಿಯವರು ಮುಂಬೈ ಕನ್ನಡ ಸಂಘದ ಅಮೃತ ಮಹೋತ್ಸವ, ಮೈಸೂರ ದಸರಾ ಉತ್ಸವ, ಲಾತುರ ಪಂ.ಆಚಾರ್ಯ ಭಾತಕಂಡೆ ಸಂಗೀತ ಸಮಾರೋಪ, ಕುಂದಗೋಳ ಪಂ,ಸವಾಯಿ ಗಂಧರ್ವ ಉತ್ಸವ, ಬೆಂಗಳೂರು ಪಂ.ಅರ್ಜುನ ಸಾ ನಾಕೋಡ ಸ್ಮೃತಿ ಸಂಗೀತ ಸಮಾರೋಹ, ಡಾ.ಪುಟ್ಟರಾಜ ಗವಾಯಿ ಪುಣ್ಯತಿಥಿ ಸಂಗೀತ ಸಮಾರೋಹ ಗದಗ, ಉಸ್ತಾದ ಹಾಜಿಬಾಬಾ ಸಾಹೇಬ ಮಿರಜಕರ ಸಾಂಗ್ಲಿ, ಕಿತ್ತೂರ ಉತ್ಸವ ಮೊದಲಾದ ಕಡೆಗಳಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಂಡಿತ ಶಂಕರ ಕಬಾಡಿಯವರು ನಾಡಿನ ವಿವಿಧ ನೃತ್ಯ ವಾರ್ಷಿಕೋತ್ಸವಗಳಲ್ಲಿ ವಾಯಲಿನ್ ನುಡಿಸಿ ಕಲಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವಿದೂಷಿ ರೋಹಿಣಿ ಇಮಾರತಿ, ವಿದೂಷಿ ಪ್ರಮೋದಾ ಉಪಾಧ್ಯಾಯ, ವಿದೂಷಿ ನಾಗರತ್ನ ಹಡಗಲಿ, ವಿದೂಷಿ ಸುಮಾ ಹೆಗಡೆ, ವಿದ್ವಾನ್ ಸರ್ವೇಶ್ವರ ಮನವಾಚಾರ್ಯ ಮುಂತಾದ ಭರತನಾಟ್ಯ ಗುರುಗಳ ನೃತ್ಯ ಕೇಂದ್ರಗಳ ಸಮಾರಂಭದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. 

1995ರಲ್ಲಿ ಪಂಡಿತ ಕಬಾಡಿಯವರು ಗದಗಿನ ನೀತುಶ್ರೀ ಅವರನ್ನು ವಿವಾಹವಾದರು. ಅವರಿಗೆ ಮೂವರು ಹೆಣ್ಣುಮಕ್ಕಳು. ಪ್ರಿಯಾಂಕ, ಅಕ್ಷತಾ ಮತ್ತು ರೀನಾ. ಸಧ್ಯ ಧಾರವಾಡದ ಸಂಪಿಗೆನಗರದಲ್ಲಿ ವಾಸಿಸುತ್ತಿದ್ದು, 2024ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ. ಸುಪ್ರಸಿದ್ಧ ಪೀಟೀಲು ವಾದಕ ಪಂ.ಶಂಕರ ಕಬಾಡಿಯವರನ್ನು ಆಕಾಶವಾಣಿಯು ಏ ಗ್ರೇಡ್ ಕಲಾವಿದರೆಂದು ಗುರುತಿಸಿ ಗೌರವಿಸಿದೆ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯು ಏಕವ್ಯಕ್ತಿ ಪೀಟೀಲು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದುದರ ನಿಮಿತ್ತ ಅವರನ್ನು ಸನ್ಮಾಸಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಸಾಂಸ್ಕೃತಿಕ ಗುರು ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘವು ಕಬಾಡಿಯವರ ಸಂಗೀತ ಸೇವೆಯನ್ನು ಪರಿಗಣಿಸಿ ಗುರು ಪ್ರಶಸ್ತಿಯನ್ನು ನೀಡಿ ಸನ್ಮಾಸಿದೆ. ಪಂಡಿತ ಶಂಕರ ಕಬಾಡಿಯವರು ಸಂಗೀತ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದಲೂ ಶೃದ್ಧೆಯಿಂದ ಪ್ರಾಮಾಣಿಕವಾಗಿ ನಿರಂತರ ಸೇವೆಗೈಯುತ್ತಿದ್ದು, ಸರಕಾರದಿಂದ ಯಾವುದೇ ಪ್ರಶಸ್ತಿಗಳು ಬರದಿರುವುದು ವಿಷಾದನೀಯ. ಅವರು ಪ್ರಶಸ್ತಿಗಾಗಿ ಬೆನ್ನು ಹತ್ತದೇ ಸಂಗೀತ ಸೇವೆಯಲ್ಲಿ ಮುನ್ನಡೆದಿರುವರು. ಇಂತಹ ಸಂಗೀತದ ಮೇರು ಸಾಧಕರನ್ನು ಸರಕಾರ ಗುರುತಿಸಬೇಕೆಂಬುದೇ ಎಲ್ಲರ ಆಶಯ.  

ಸಂಗೀತ ಲೋಕದಲ್ಲಿ ಇರುವ ಮಹಾನ್ ಪ್ರತಿಭೆ ಪಂಡಿತ ಶಂಕರ ಕಬಾಡಿಯವರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದಾರೆ. ಪೀಟೀಲು ನುಡಿಸುವ ತಂತ್ರಗಳನ್ನು ಅವರು ಸ್ವತಃ ಹುಟ್ಟು ಹಾಕಿದ್ದಾರೆ. ಈ ದೃಷ್ಟಿಯಿಂದ ಅವರು ಪೀಟೀಲು ತಾಂತ್ರಿಕರು. ತಂತಿಯ ಮೇಲಿನ ಅವರ ನಡಿಗೆ ನಿರಂತರವಾಗಿರಲಿ. ಸಂಪರ್ಕಿಸಿ. 9901202412 

- ಸುರೇಶ ಗುದಗನವರ

ಧಾರವಾಡ

9449294694 


- * * * -